ಟಿಬಿ ಡ್ಯಾಂ ಕ್ರಸ್ಟ್‌ಗೇಟ್ ಕಟ್ಟಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ

| Published : Aug 14 2024, 12:45 AM IST

ಟಿಬಿ ಡ್ಯಾಂ ಕ್ರಸ್ಟ್‌ಗೇಟ್ ಕಟ್ಟಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್‌ ಗೇಟ್ ಕಟ್ಟಾಗಿರುವ ದುರ್ಘಟನೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಎಐಕೆಕೆಎಂಎಸ್ ರೈತ ಸಂಘಟನೆಯ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳ್ಳಾರಿ: ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್‌ ಗೇಟ್ ಕಟ್ಟಾಗಿರುವ ದುರ್ಘಟನೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಎಐಕೆಕೆಎಂಎಸ್ ರೈತ ಸಂಘಟನೆಯ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿವರ್ಷ ಜಲಾಶಯಕ್ಕೆ ನೀರು ಬರುವ ಮುನ್ನವೇ ಕ್ರಸ್ಟ್‌‌ಗೇಟ್‌ ಸ್ಥಿತಿಗತಿ ಸೇರಿದಂತೆ ನೀರು ಹೆಚ್ಚಳದಿಂದಾಗುವ ಅಪಾಯಗಳ ಕುರಿತು ನಿಗಾ ವಹಿಸಬೇಕಿತ್ತು. ಪ್ರತಿಯೊಂದು ಘಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ಗಂಭೀರವಾದ ಪ್ರಯತ್ನಗಳಾಗಬೇಕಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದೆ. ಸಂಬಂಧಿಸಿದ ಅಧಿಕಾರಿಗಳ ಅಸಡ್ಡೆಯೂ ಇಲ್ಲಿ ಕಂಡು ಬಂದಿದೆ. ಹೀಗಾಗಿಯೇ ಕ್ರಸ್ಟ್‌‌ಗೇಟ್ ಕಟ್ಟಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ ಎಂದು ದೂರಿದರಲ್ಲದೆ, ಘಟನೆ ಹಿನ್ನೆಲೆಯಲ್ಲಾದ ಬೆಳೆಹಾನಿ ನಷ್ಟ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ತುಂಗಾಭದ್ರಾ ಜಲಾಶಯ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಲಕ್ಷಾಂತರ ರೈತರ ಜೀವನಕ್ಕೆ ಆಸರೆಯಾಗಿದೆ. ಇದರ ನೀರನ್ನು ಒಂದು ಕೃಷಿಗೆ ಬಳಸಿದರೆ ಮತ್ತೊಂದು ಕುಡಿಯುವ ನೀರಿಗೆ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದರಿಂದಾಗಿ ಸಾವಿರಾರು ಜನ ಜೀವನ ಕಟ್ಟಿಕೊಂಡಿದ್ದರು. ಇದೀಗ ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕಟ್ಟಾಗಿರುವುದರಿಂದ ನೀರಿನ ಅಭಾವ ಸೃಷ್ಟಿಯಾಗಿ ಈ ಭಾಗದ ರೈತರ ಕೃಷಿಗೆ ನೀರಿಲ್ಲದಂತಾಗಿದೆ. ಇದರಿಂದ ಬೆಳೆ ನಷ್ಟವೂ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದಷ್ಟು ಬೇಗ ಜಲಾಶಯದ ನೀರು ವ್ಯರ್ಥವಾಗಿ ನದಿ ಪಾಲಾಗದಂತೆ ಎಚ್ಚರ ವಹಿಸಬೇಕು. ಕಟ್ಟಾಗಿರುವ 19ನೇ ಗೇಟ್ ಅನ್ನು ಸರಿಪಡಿಸಬೇಕು ಹಾಗೂ ನದಿಗೆ ಹರಿದುಹೋಗಿರುವ ಅಪಾರ ಪ್ರಮಾಣದ ನೀರಿನಿಂದಾಗಿ ರೈತರ ಬೆಳೆಗೆ ನೀರಿಲ್ಲದಂತಾಗಿದ್ದು, ಬೆಳೆನಷ್ಟ ಪರಿಹಾರವನ್ನೂ ಘೋಷಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಜಿಲ್ಲಾ ಉಪಾಧ್ಯಕ್ಷ ಕೋಳೂರು ಬಸಣ್ಣ ಮಾತನಾಡಿದರು. ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಬಸವರಾಜ, ಜಿಲ್ಲಾ ಸಮಿತಿ ಸದಸ್ಯರಾದ ಖಾಸೀಂಸಾಬ್, ಮಾಬುಸಾಬ್, ರೈತರಾದ ರಾಮದಾಸ್, ಹನುಮಂತ, ಚೆನ್ನಬಸವನ ಗೌಡ, ಯಾಲ್ಪಿ ಹನುಮಂತ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.