ಯುವಕ ನಿಗೂಢ ಕಣ್ಮರೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ

| Published : Aug 31 2024, 01:31 AM IST

ಸಾರಾಂಶ

ಹೋಟೆಲ್‌ನ ಮಾಲೀಕ ಉಮೇಶ್ ಮತ್ತವರ ಕುಟುಂಬದವರು ಯುವಕ ರಾಘವೇಂದ್ರನನ್ನು ಉದ್ದೇಶಪೂರ್ವಕವಾಗಿಯೇ ಕೊಲೆಗೈದಿರಬಹುದೆಂದು ಯುವಕನ ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರೂ ಸ್ಥಳೀಯ ಪೊಲೀಸರು ದೂರನ್ನು ಸ್ವೀಕರಿಸದೇ ಅನುಮಾನಿತ ಹೋಟೆಲ್ ಮಾಲೀಕ ಮತ್ತವರ ಕುಟುಂಬವನ್ನು ಬಂಧಿಸಿ ವಿಚಾರಣೆಗೊಳಪಡಿಸದೆ ಕರ್ತವ್ಯ ಲೋಪವೆಸಗಿದ್ದಾರೆ.

ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆಂದು ಆರೋಪಿಸಿ ಪ್ರತಿಭಟನೆ । ಕುಂಬಾರ ಜಾಗೃತಿ ವೇದಿಕೆಯಿಂದ ಎಸ್‌ಪಿ ಕಚೇರಿ ಎದುರು ಹೋರಾಟ

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ೨೦ ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿರುವ ಯುವಕ ರಾಘವೇಂದ್ರನ ಪ್ರಕರಣದಲ್ಲಿ ಕೆಆರ್‌ಎಸ್ ಠಾಣೆ ಪೊಲೀಸರು ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತಾ ಪ್ರಕರಣದ ಮುಖ್ಯ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಮತ್ತು ಯುವಕನ ಸಂಬಂಧಿಕರು ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪೊಲೀಸರ ಕ್ರಮವನ್ನು ಖಂಡಿಸಿದರಲ್ಲದೇ ಯುವಕ ರಾಘವೇಂದ್ರನನ್ನು ಹುಡುಕಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದರು.

ಕೆ.ಆರ್. ಪೇಟೆ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಶಿವಕುಮಾರ್ ಪುತ್ರ ರಾಘವೇಂದ್ರ ಕಳೆದ ಎಂಟು ವರ್ಷಗಳಿಂದ ಕೆಆರ್‌ಎಸ್ ಠಾಣೆ ಸಮೀಪದ ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಆಗಸ್ಟ್ ೧೦ ರಿಂದ ಕಾಣೆಯಾಗಿದ್ದು, ಈ ಬಗ್ಗೆ ಕೆಆರ್‌ಎಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೋಟೆಲ್‌ನ ಮಾಲೀಕ ಉಮೇಶ್ ಮತ್ತವರ ಕುಟುಂಬದವರು ಯುವಕ ರಾಘವೇಂದ್ರನನ್ನು ಉದ್ದೇಶಪೂರ್ವಕವಾಗಿಯೇ ಕೊಲೆಗೈದಿರಬಹುದೆಂದು ಯುವಕನ ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರೂ ಸ್ಥಳೀಯ ಪೊಲೀಸರು ದೂರನ್ನು ಸ್ವೀಕರಿಸದೇ ಅನುಮಾನಿತ ಹೋಟೆಲ್ ಮಾಲೀಕ ಮತ್ತವರ ಕುಟುಂಬವನ್ನು ಬಂಧಿಸಿ ವಿಚಾರಣೆಗೊಳಪಡಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಘವೇಂದ್ರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ಆತನು ರಾಘವೇಂದ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ಹೇಳಿದ್ದಾನೆ. ಒಂದು ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ಇಷ್ಟರಲ್ಲಿ ಶವಪತ್ತೆಯಾಗಬೇಕಿತ್ತು. ಆದರೆ ಸ್ಥಳೀಯ ಪೊಲೀಸರು ಶವವನ್ನು ಪತ್ತೆ ಹಚ್ಚುವುದಾಗಲೀ, ಸಾವಿಗೆ ಮೂಲ ಕಾರಣವನ್ನು ಹುಡುಕುವುದಾಗಲೀ ಮಾಡುತ್ತಿಲ್ಲ. ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಬಲಾಢ್ಯರ ಕೈವಾಡವಿದೆ ಎಂದು ಆರೋಪಿಸಿದರು.

ಯುವಕ ರಾಘವೇಂದ್ರನ ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಅನುಮಾನಿತ ಹೋಟೆಲ್ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಪ್ರಕರಣದಲ್ಲಿ ಲೋಪವೆಸಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕುಂಬಾರ ಸಮಾಜದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಉನ್ನತ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.

ವಿಶೇಷ ತಂಡ ರಚನೆ:

ಪ್ರತಿಭಟನಾಕಾರರ ಮನವಿಯನ್ನು ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಈ ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಲಾಗಿದೆ. ವಿಶೇಷ ತಂಡವನ್ನು ರಚಿಸಿ ಪ್ರಕರಣವನ್ನು ಭೇದಿಸಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಬಂಧಿಸಲಾಗುವುದು ಹಾಗೂ ಈ ಕುಟುಂಬಕ್ಕೆ ನ್ಯಾಯ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮೈಸೂರು ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಪ್ರಕಾಶ್, ಕೆ.ಆರ್.ನಗರ ತಾಲೂಕು ಸಂಘದ ಅಧ್ಯಕ್ಷ ವೀರಭದ್ರಶೆಟ್ಟಿ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಪ್ರದೀಪ್, ವೆಂಕಟೇಶ್, ನಾಗೇಶ್, ಮಹೇಶ್, ಸುಕಂದ್‌ರಾಜ್, ಮುಖಂಡರಾದ ರಾಜಶೇಖರ್, ರಾಜೇಶ್, ಜಯರಾಂ, ಕುಮಾರ್, ಸ್ವಾಮಿಗೌಡ ಸೇರಿದಂತೆ ಇತರರು ಹಾಜರಿದ್ದರು.

----------

೩೦ಕೆಎಂಎನ್‌ಡಿ-೧

ನಿಗೂಢವಾಗಿ ನಾಪತ್ತೆಯಾಗಿರುವ ಯುವಕ ರಾಘವೇಂದ್ರನನ್ನು ಪತ್ತೆಹಚ್ಚುವಲ್ಲಿ ಕೆಆರ್‌ಎಸ್ ಠಾಣೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.