ಜನರಿಂದ ಜನರಿಗೆ ನೆರವು ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಾದ್ಯಂತ ನೈಸರ್ಗಿಕ ಹಾಗೂ ಮಾನವ ವಿಪತ್ತುಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಾಚಾರ್ಯ ಪ್ರೊ. ಎಸ್.ಪಿ. ಗೌಡರ ಹೇಳಿದರು.
ರಾಣಿಬೆನ್ನೂರು: ಜನರಿಂದ ಜನರಿಗೆ ನೆರವು ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಾದ್ಯಂತ ನೈಸರ್ಗಿಕ ಹಾಗೂ ಮಾನವ ವಿಪತ್ತುಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಾಚಾರ್ಯ ಪ್ರೊ. ಎಸ್.ಪಿ. ಗೌಡರ ಹೇಳಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಸಿದ್ದಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ರೆಡ್ ಕ್ರಾಸ್ ಘಟಕಗಳು ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯು ಜೀವ ಪರ ಕಾಳಜಿಹೊಂದಿದ್ದು ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿದೆ. ಇದರ ಉಗಮವು ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ ಎಂದೇ ಹೇಳಬಹುದು. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನ ಮೇ 8ನ್ನು ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ ಎಂದರು. ಮಾನವನು ಆಪತ್ತಿನಲ್ಲಿ ಸಿಲುಕಿಕೊಂಡಾಗ ಕೂಡಲೇ ಸಹಾಯ ಮಾಡುವ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ನಾಗರಾಜ ಗೋಡಿಹಾಳ ಮಾತನಾಡಿ, ರಸ್ತೆ ಅಪಘಾತ, ಅಗ್ನಿ ಅವಘಡ ಸೇರಿದಂತೆ ಇತರೆ ಆಪತ್ತುಗಳಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವುದರೊಂದಿಗೆ, ಪ್ರಥಮ ಚಿಕಿತ್ಸೆ ಕೊಡುವ ಕೆಲಸ ಮೊದಲು ಮಾಡಬೇಕು. ಅದನ್ನು ಬಿಟ್ಟು ವಿಡಿಯೋ ಮಾಡಿ ವೈರಲ್ ಮಾಡುವಂತಹ ಕಾರ್ಯಕ್ಕೆ ಇಳಿಯಬೇಡಿ. ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯಗಳನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು. ಉಪನ್ಯಾಸಕ ಶಂಕ್ರಪ್ಪ ಹರಿಜನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಐಕ್ಯೂಎಸಿ ಸಂಚಾಲಕ ಪ್ರೊ ಬಸವರಾಜ ಹುಗ್ಗಿ, ಪ್ರಾಧ್ಯಾಪಕ ರೇವಣಸಿದ್ದಪ್ಪ ಕೆ.ಬಿ., ರವಿಕುಮಾರ ಎಸ್.ಯು. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಂಬಿಕಾ ಹೊಸಮನಿ, ರವಿ ಎಂ., ಶೋಭಾ ನಂದಿಹಳ್ಳ, ವೀರೇಶ ಷಡಕ್ಷರಿಮಠ, ಗಂಗವ್ವ ದಾನಪ್ಪನವರ, ಮೇಘನಾ ಮಾಂಗ್ ಸಾವಿತ್ರಮ್ಮ ಬಿ. ಮತ್ತಿತರರಿದ್ದರು.