ಸಾರಾಂಶ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನಲ್ಲಿ ಕಾಡಾನೆಗಳ ಉಪಟಳ ನಿಂತಿಲ್ಲ, ತಾಲೂಕಿನ ಬೇಗೂರು ಭಾಗದ ಕುರುಬರಹುಂಡಿ, ಮಂಚಹಳ್ಳಿ ಆಲತ್ತೂರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೇಳಿ, ಕೇಳಿ ಓಂಕಾರ ವಲಯದಲ್ಲೇ ಹೆಚ್ಚು ಆದರೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಷ್ಟಪಟ್ಟು ಬೆಳೆದ ಫಸಲು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಓಂಕಾರ ವಲಯದಲ್ಲಿ ಕಂದಕ ನಿರ್ವಹಣೆ ಮಾಡುತ್ತಿಲ್ಲ. ಸೋಲಾರ್ ಬೇಲಿ ನಿಷ್ಪ್ರಯೋಜಕವಾಗಿವೆ. ಅರಣ್ಯ ಸಿಬ್ಬಂದಿಗಳು ಗಸ್ತು ಮಾಡುತ್ತಿಲ್ಲ. ಕಾಟಾಚಾರಕ್ಕೆ ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ಕಾಡಾನೆ ತಡೆಗಟ್ಟಲು ಓಂಕಾರ ವಲಯದ ಅಧಿಕಾರಿಗಳಿಗೆ ಇರುವ ಅಡ್ಡಿಯಾದರೂ ಏನು ಎಂಬ ರೈತರ ಪ್ರಶ್ನೆಗೆ ಅರಣ್ಯ ಇಲಾಖೆ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಕಾಡಾನೆಗಳು ಜಮೀನಿಗೆ ದಾಳಿ ಮಾಡಿದಾಗ ರೈತರು ಆಕ್ರೋಶ ವ್ಯಕ್ತಪಡಿಸಿದಾಗ ಎಂದಿನಂತೆ ಅಧಿಕಾರಿಗಳು ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಉತ್ತರ ಸಿದ್ಧವಾಗಿರುತ್ತೇ?ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಅರಣ್ಯ ಸಿಬ್ಬಂದಿಗಳ ಮೇಲೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಿಡಿತ ಸಾಧಿಸುತ್ತಿಲ್ಲ. ಅರಣ್ಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೋ, ಬೇಜವಬ್ದಾರಿಯೋ ಏನೋ ಕಾಡಾನೆಗಳ ಹಾವಳಿ ಹೆಚ್ಚಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ಮುಂದಾದರೂ ಸಿಬ್ಬಂದಿಗಳ ಮೇಲೆ ಹಿಡಿತ ಸಾಧಿಸಿ, ಅರಣ್ಯ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ಹಾವಳಿ ತಡೆಗೆ ಕಡಿವಾಣ ಹಾಕಲಿ ಎಂದು ಆಗ್ರಹಿಸಿದ್ದಾರೆ.
ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿವೆ. 5 ಕಿ.ಮೀ.ರೇಲ್ವೆ ಬ್ಯಾರಿಕೇಡ್ ಆಗಿದ್ದು, ಮತ್ತೆ 4 ಕಿಮಿ ರೇಲ್ವೆ ಬ್ಯಾರಿಕೇಡ್ ಅನುದಾನ ಬಂದಿದೆ, ಟೆಂಡರ್ ಕರೆದು ಕೆಲಸವಾದರೆ ಖಂಡಿತ ಆನೆ ಹಾವಳಿಗೆ ಬ್ರೇಕ್ ಬೀಳಲಿದೆ. ಓಂಕಾರ ವಲಯ ಅರಣ್ಯಾಧಿಕಾರಿ ವರ್ಗ ಆಗಿದ್ದು, ಹೊಸ ಆರ್‌ಎಫ್‌ಒ ಬಂದ ಬಳಿಕ ಸಿಬ್ಬಂದಿಗಳ ಜೊತೆಗೆ ಸಭೆ ನಡೆಸಿ, ಆನೆ ದಾಟದಂತೆ ಸೂಕ್ತ ಸೂಚನೆ ನೀಡಲಾಗುವುದು.-ಕೆ.ಸುರೇಶ್,ಎಸಿಎಫ್, ಗುಂಡ್ಲುಪೇಟೆ ಉಪ ವಿಭಾಗಮಂಚಹಳ್ಳಿ ಬಳಿ ಕಾಡಾನೆ ದಾಳಿಗೆ ಫಸಲು ನಾಶ
ಗುಂಡ್ಲುಪೇಟೆ: ತಾಲೂಕಿನ ಮಂಚಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಕಾಡಾನೆಗಳ ದಾಳಿಗೆ ಇಬ್ಬರು ರೈತರ ಜಮೀನಿನ ಮೇಲೆ ದಾಳಿ ನಡೆಸಿದ್ದು,ಲಕ್ಷಾಂತರ ಮೌಲ್ಯದ ಫಸಲು, ಸೋಲಾರ್ ಬೇಲಿ ನಾಶವಾಗಿದೆ. ಮಂಚಹಳ್ಳಿ ಗ್ರಾಮದ ಮಹದೇವಪ್ಪ, ಬಸವರಾಜಪ್ಪಗೆ ಸೇರಿದ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಯನ್ನು ತುಳಿದು ಹಾಕಿವೆ. ಟೊಮೆಟೋ, ಕೋಸು, ಬಿನೀಸ್ ಬೆಳೆಗಳನ್ನು ತುಳಿದು, ತಿಂದು ಹಾಳು ಮಾಡಿವೆ.ಕಾಡಾನೆಗಳ ಹಾವಳಿಗೆ ರೈತರು ನೆಮ್ಮದಿಯಿಂದ ಕೃಷಿ ಮಾಡಲು ಆಗುತ್ತಿಲ್ಲ, ಕೂಡಲೇ ಅರಣ್ಯ ಇಲಾಖೆ ಫಸಲು ಹಾಳು ಮಾಡಿದ ಜಮೀನಿನ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮಂಚಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಹರೀಶ್ ಆಗ್ರಹಿಸಿದ್ದಾರೆ.