ಸಾರಾಂಶ
ಗದಗ: ಜಗದ್ಗುರು ರೇಣುಕರು ಕೇವಲ ಆಧ್ಯಾತ್ಮ ಪುರುಷರಲ್ಲ, ಬದಲಾಗಿ ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ಪತ್ರಕರ್ತ ಆನಂದಯ್ಯ ವಿರಕ್ತಮಠ ಹೇಳಿದರು.
ಅವರು ನಗರದ ಮುಳಗುಂದ ನಾಕಾ ಬಳಿ ಇರುವ ಅಡವೀಂದ್ರ ಸ್ವಾಮಿಗಳ ಮಠದಲ್ಲಿ ನಡೆದ 332ನೇ ಶಿವಾನುಭವ ಹಾಗೂ ಜಗದ್ಗುರು ರೇಣುಕ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಹೀಗೆ ಯುಗ-ಯುಗಗಳಲ್ಲೂ ಒಂದೊಂದು ಹೆಸರಿನಿಂದ ಭೂಲೋಕ ಉದ್ಧರಿಸಿದ ರೇಣುಕರು ತೆಲಂಗಾಣದ ಕೊಲ್ಲಿ ಪಾಕಿಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ನಾಗರಿಕತೆ ಬೆಳೆಯುವ ಮುನ್ನವೇ ಕಾಯಕದ ಆಧಾರದ ಮೇಲೆ ಕುಲ ಹದಿನೆಂಟಕ್ಕೂ ಮಠಗಳನ್ನು ಸ್ಥಾಪನೆ ಮಾಡಿ ಸಮಾನತೆಯ ಸೂತ್ರ ಕಂಡವರಾಗಿದ್ದರು. ಜತೆಗೆ ಮಾನವರ ಉನ್ನತಿಕರಣಕ್ಕೆ ಶಿಕ್ಷಣ ಅವಶ್ಯ ಎಂಬುದನ್ನು ಅರಿತ ಅವರು ಊರಿಗೊಂದು ಸಾಲಿಮಠ, ಗುರುಮಠ, ಆರೋಗ್ಯಕ್ಕಾಗಿ ವೈದ್ಯಮಠ ಹೀಗೆ ಹತ್ತಾರು ಮಠಗಳ ಸ್ಥಾಪಿಸಿ ತಿರುಕೊಂಡು ಬಂದು ಕರಕೊಂಡು ಉಣ್ಣುವುದನ್ನು ಕಲಿಸಿಕೊಟ್ಟವರು ಅಷ್ಟೇ ಅಲ್ಲ, ಧರ್ಮ ಸಂರಕ್ಷಣೆಗಾಗಿ ಐದು ಪೀಠಗಳ ಜತೆಗೆ ಊರಿಗೊಬ್ಬ ಶಿವಾಚಾರ್ಯ ಸ್ವಾಮಿಗಳನ್ನು ನೇಮಿಸಿ ಧರ್ಮ ಸಂರಕ್ಷಣೆ ಮಾಡಿ, ಯಾವ ಜಾತಿ-ಕುಲ-ಗೋತ್ರ ನೋಡದೇ ಸರ್ವರ ಅಭಿವೃದ್ಧಿ ಮಂತ್ರ ಪಠಿಸಿದ ಅವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದರು. ಅಲ್ಲದೇ ವೀರಶೈವರು ವಿರೋಧ ರಹಿತರು, ವಿಕಾರ ರಹಿತರಾಗಿರಬೇಕು ಎಂಬುದನ್ನು ಅಗಸ್ತ್ಯಮಹರ್ಷಿಗಳ ಹಾಗೂ ಜಗದ್ಗುರು ರೇಣುಕರ ನಡುವೆ ನಡೆಯುವ ಸಂವಾದ ಒಳಗೊಂಡ ಶ್ರೀ ಸಿದ್ಧಾಂತ ಶಿಖಾಮಣಿಯ 101 ಸ್ಥಲಗಳಲ್ಲಿ ಕಾಣಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಕೆ. ಎಚ್. ಬೇಲೂರ ಮಾತನಾಡಿ, ಬೇಂದ್ರೆಯವರ ನಕ್ಕು ನಗಿಸುವುದೇ ಸ್ವರ್ಗ ಎಂಬ ವಿಚಾರ ಕುರಿತಾಗಿ ಮಾತನಾಡಿದರು.ಡಾ. ಜಿ.ಎಸ್. ಹಿರೇಮಠ ಮಾತನಾಡಿ, ರೇಣುಕರು ಮಾಡಿದ ಧರ್ಮಕಾರ್ಯ ನಮಗೆಲ್ಲ ಆದರ್ಶವಾಗಿದ್ದು, ನಾವೆಲ್ಲ ಅವರ ಬಗ್ಗೆ ಓದಿದಾಗ ಮಾತ್ರ ಅವರ ಚರಿತ್ರೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇವಡ್ಡಟ್ಟಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮುಂತಾದವರು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಪ್ರಭಯ್ಯ ದಂಡಾವತಿಮಠ, ಪ್ರಸಾದ ಸೇವೆಗೈದ ಹಿರಿಯ ವಕೀಲ ಮುಧೋಳ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ನೇತೃತ್ವವನ್ನು ಅಡವೀಂದ್ರ ಸ್ವಾಮಿಗಳ ಮಠದ ಧರ್ಮಾಧಿಕಾರಿ ಮಹೇಶ್ವರ ಸ್ವಾಮೀಜಿ ವಹಿಸಿದ್ದರು. ವಿನಾಯಕ ಸಜ್ಜನ ಸ್ವಾಗತಿಸಿದರು, ಪ್ರಕಾಶ ಬಂಡಿ ವಂದಿಸಿದರು. ಯು.ಆರ್. ಭೂಸನೂರಮಠ ನಿರೂಪಿಸಿದರು.