ಕೆಂಪೇಗೌಡರು ಎಲ್ಲರನ್ನೂ ಸಮಭಾವದಿಂದ ಕಂಡವರು

| Published : Jul 06 2025, 01:48 AM IST

ಸಾರಾಂಶ

ಕೆಲವು ಮಹಾನ್ ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಾಧನೆಗಳು ಅಮರವಾಗಿರುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾಡಪ್ರಭು ಕೆಂಪೇಗೌಡರು ಎಲ್ಲಾ ಮತ- ಧರ್ಮಗಳನ್ನು ಸಮಭಾವದಿಂದ ಕಂಡವರು ಎಂದು ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ವಿಸ್ತರಣಾ ಕೇಂದ್ರವು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೆಲವು ಮಹಾನ್ ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಾಧನೆಗಳು ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ಕೆಂಪೇಗೌಡ ಸೇರುತ್ತಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ.52 ರಷ್ಟು ಬೆಂಗಳೂರಿನಿಂದಲೇ ಬರುತ್ತಿದೆ. ಕರ್ನಾಟಕಕ್ಕೆ ಬೆಂಗಳೂರು ಕಾಮಧೇನು ಆಗಿದೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು ಎಂದು ಅವರು ಹೇಳಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು, ಸಂಘಟನೆಯ ಕೊರತೆ ಇದೆ. ಸಮುದಾಯದ ತಳಮಟ್ಟದಲ್ಲಿ ಇರುವ ವ್ಯಕ್ತಿಯ ನೆರವಿಗೆ ಸಂಘಟನೆಗಳು ಪೂರಕವಾಗುವ ನಿಟ್ಟಿನಲ್ಲಿ ಸಮುದಾಯದವರು ಒಗ್ಗಟ್ಟಾಗಿರಬೇಕು. ಕೆಂಪೇಗೌಡ ದೂರದೃಷ್ಠಿ ಉಳ್ಳ ಅರಸರಾಗಿದ್ದರು ಎಂದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ವಿಶೇಷ ಕಾರ್ಯದರ್ಶಿ ಡಾ.ಪಿ. ಬೋರೇಗೌಡ, ಸಂಗೀತ ವಿವಿ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಎಸ್. ನವೀನ್ ಕುವಾರ್, ಕೇಂದ್ರದ ಸಂಯೋಜನಾಧಿಕಾರಿ ಡಾ.ಸಿ. ರಾಮೇಗೌಡ, ಡೀನ್ ಪ್ರೊ.ಎಂ. ರಾಮನಾಥಂ ನಾಯ್ದು ಮೊದಲಾದವರು ಇದ್ದರು.