ಸಾರಾಂಶ
ವಿದ್ಯಾರ್ಥಿಗಳು ಹಿರಿಯ ಸಾಧಕರ ಆದರ್ಶ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ಕನ್ನಡಪ್ರಭವಾರ್ತೆ ಕೊರಟಗೆರೆ
ವಿದ್ಯಾರ್ಥಿಗಳು ಹಿರಿಯ ಸಾಧಕರ ಆದರ್ಶ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.ಸೋಮವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆ ಮತ್ತು ಕಸಾಪ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ೨೦೨೩-೨೪ ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ.೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೧೮ ವರ್ಷ ತುಂಬಿದ ಯುವ ಜನತೆ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗುವ ಮೂಲಕ ಕನ್ನಡ ಭಾಷೆ ಉಳಿಸಿ ಕನ್ನಡ ಕಟ್ಟಿ ವಿಸ್ತರಿಸುವ ಕೆಲಸ ಮಾಡಬೇಕಾಗಿದೆ ಎಂದರು. ತಾಲೂಕಿನಲ್ಲಿ ನೂತನ ಸದಸ್ಯರ ನೋಂದಾಣಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ವೈದ್ಯ, ವಕೀಲ, ನೌಕರ, ಪೊಲೀಸ್, ವಿದ್ಯಾರ್ಥಿಗಳ, ವ್ಯಾಪಾರಿಗಳು, ಜನಪ್ರತಿನಿಧಿಗಳು ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಹಾಗೂ ಸಾಹಿತಿಗಳ ಪ್ರತ್ಯೇಕ ಸಭೆಗಳನ್ನು ನಡೆಸಿ ಅವರ ಸಹಕಾರ ಪಡೆದು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಜನಪರ ಪರಿಷತ್ತನ್ನಾಗಿಸಿ ತಾಲೂಕಿನಲ್ಲಿ ಕನ್ನಡ ಸಮ್ಮೇಳನ ನಡೆಸಬೇಕಾಗಿದೆ ಎಂದು ಹೇಳಿದರು.ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಯೋಗಿಶಪ್ಪ ಮಾತನಾಡಿ, ಇತ್ತೀಚೆಗೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು ಹಿನ್ನೆಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ಕಾರ್ಯಕ್ರಮದಯಲ್ಲಿ ಜನಪದ ಕಲಾವಿದ ಕಂಠಲಗೆರೆ ಹೊನ್ನಯ್ಯ, ಜಿಲ್ಲಾ ಕಸಾಪ ಸಂಚಾಲಕ ಜಿ.ಹೆಚ್.ಮಹದೇವಪ್ರಸಾದ್ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಈರಣ್ಣ, ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ, ಜಿ.ಪಂ.ಮಾಜಿ ಸದಸ್ಯೆ ದ್ರಾಕ್ಷಾಯಿಣಿ ರಾಜಣ್ಣ, ಕಸಾಪ ಗೌರವ ಕಾರ್ಯದರ್ಶಿ ಹನುಮಂತರೆಡ್ಡಿ, ಕಾರ್ಯದರ್ಶಿ ಶಿವಾನಂದ್, ಪತ್ರಕರ್ತ ಎನ್.ಪದ್ಮನಾಭ, ಲಕ್ಷ್ಮೀಪುತ್ರ, ಚಿಕ್ಕಪ್ಪಯ್ಯ, ಮಂಜುಳಾ ರಾಜಕುಮಾರ್ ಮತ್ತಿತರರಿದ್ದರು. ಸಭೆಗೂ ಮುನ್ನ ಇತ್ತೀಚಿಗೆ ನಿಧನರಾದ ಕಮಲಾ ಹಂಪನಾ ಹಾಗೂ ಅಪರ್ಣಾ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.