ಸಾರಾಂಶ
ಬೀರೂರು, ಕನ್ನಡ ನಾಡಿನ ಸಂಪತ್ತು ಅಪರಿಮಿತ. ಭಾಷೆ ಶ್ರೀಮಂತಿಕೆ ಅನನ್ಯ. ಇವೆರಡನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರಾದ ನಮ್ಮ ಮೇಲಿದೆ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜು ಅಭಿಪ್ರಾಯಪಟ್ಟರು.
ಬೀರೂರಿಗೆ ಆಗಮಿಸಿದ ಕನ್ನಡರಥ ಯಾತ್ರೆಗೆ ಪುಷ್ಪಮಾಲೆ ಹಾಕಿ ಸ್ವಾಗತ
ಕನ್ನಡಪ್ರಭ ವಾರ್ತೆ, ಬೀರೂರುಕನ್ನಡ ನಾಡಿನ ಸಂಪತ್ತು ಅಪರಿಮಿತ. ಭಾಷೆ ಶ್ರೀಮಂತಿಕೆ ಅನನ್ಯ. ಇವೆರಡನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರಾದ ನಮ್ಮ ಮೇಲಿದೆ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜು ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಭಾನುವಾರ ಆಗಮಿಸಿದ ಕನ್ನಡ ರಥ ಯಾತ್ರೆಗೆ ತಹಸೀಲ್ದಾರ್ ಪೂರ್ಣಿಮಾರೊಂದಿಗೆ ಕನ್ನಡಾಂಭೆ ಪುತ್ಥಳಿಗೆ ಪುಷ್ಪಾರ್ಚನೆಗೈದು ಮಾತನಾಡಿದರು. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ ಕನ್ನಡ ಜ್ಯೋತಿ ರಥ ಯಾತ್ರೆ 2023ರ ನವೆಂಬರ್ 2ರಿಂದ ಹಂಪಿಯಿಂದ ಪ್ರಾರಂಭಗೊಂಡು ಎಲ್ಲಾ ವಿಧಾನಸಭಾ ಕ್ಷೇತ್ರ ಗಳನ್ನು ಪೂರೈಸಿ ನಮ್ಮ ಜಿಲ್ಲೆಗೆ ಆಗಮಿಸಿದೆ ಅದನ್ನು ಗೌರಯುತವಾಗಿ ಸ್ವೀಕರಿಸಲಾಗಿದೆ ಎಂದರು.
ಕನ್ನಡ ಭಾಷೆ ಅಭಿವೃದ್ಧಿ ಕನ್ನಡಿಗರಿಂದ ಸಾಧ್ಯ. ಹೆಚ್ಚು ಕನ್ನಡ ಪದಗಳ ಬಳಕೆ ಭಾಷೆಯನ್ನು ವಿಸ್ತಾರ, ವಿಶಾಲಗೊಳಿಸುತ್ತದೆ. ಸರಳ -ಸಹಜ-ಸುಂದರವಾದ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಿ ಪೋಷಿಸುವ ಮನೋಭಾವವನ್ನುಎಲ್ಲರೂ ಬೆಳೆಸಿಕೊಳ್ಳಬೇಕು. ಕನ್ನಡತನವನ್ನು ಎಂದಿಗು ಬಿಡಬಾರದು ಎಂದು ಸಲಹೆ ನೀಡಿದರು.ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಮಾತನಾಡಿ, ಕನ್ನಡವನ್ನು ಒಂದು ದಿನಕ್ಕೆ ಮಾತ್ರ ಸಂಭ್ರಮಿಸದೇ ಪ್ರತಿ ನಿತ್ಯ ಬಳಸುವ ಮೂಲಕ ಸಂಭ್ರಮಿಸಿ ದಾಗ ಮಾತ್ರ ಉಳಿಸುವುದು ಸಾಧ್ಯ. ಕರ್ನಾಟಕಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಬಿಸಿರುವುದು ನಮ್ಮ ಹೆಮ್ಮೆ ಎಂದರು.ಪುರಸಭೆ ಅಧ್ಯಕ್ಷೆ ವನಿತ ಮಧು ಮಾತನಾಡಿ, ಕರ್ನಾಟಕ ಎಂದು ಮರು ನಾಮಕರಣವಾದ ಸಂಧರ್ಭದಲ್ಲಿ ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿವಾಣಿ ಮೂಡಿತು. ಅಂದಿನಿಂದಲೂ ಪ್ರತಿ ಮನೆ ಮನಗಳಲ್ಲಿ ಕನ್ನಡ ನಿತ್ಯೋತ್ಸವವಾಗಲಿ ಎಂಬ ರಾಜ್ಯ ಸರ್ಕಾರದ ಕರ್ನಾಟಕ ಸಂಭ್ರಮಕ್ಕೆ ನಾವೆಲ್ಲರು ಕೈಜೋಡಿಸುವ ಜೊತೆ ನಮ್ಮ ಕನ್ನಡ ಭಾಷೆ ಸಾಹಿತ್ಯ-ಸಂಸ್ಕೃತಿ ರಕ್ಷಣೆಗೆ ನಿರಂತರ ಕಾರ್ಯಚಟುವಟಿಕೆ ಅಗತ್ಯ ಎಂದರು.ಪುರಸಭಾ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಆಯೋಜಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದೆ. ನಾಗರಿಕರು ಇದನ್ನು ಅರಿತು ನಮ್ಮ ತಾಯಿ ಭಾಷೆಗೆ ಗೌರವ ನೀಡುವುದನ್ನು ಕಲಿಯೋಣ ಎಂದರು.ಇದೇ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್, ಗ್ರೇಡ್-2 ತಹಸೀಲ್ದಾರ್ ಮಂಜುನಾಥ್, ಉಪತಹಸೀಲ್ದಾರ್ ಮಲ್ಲಿಕಾರ್ಜುನ್, ಕಸಾಪ ಕಡೂರು-ಬೀರೂರು ಅಧ್ಯಕ್ಷರಾದ ಸಿಂಗಟಗೆರೆ ಸಿದ್ದಪ್ಪ, ಹರಿಪ್ರಸಾದ್, ಪುರಸಭೆ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಲೋಕೇಶಪ್ಪ, ಜ್ಯೋತಿ ಸಂತೋಷ್ ಕುಮಾರ್, ಬಾವಿಮನೆ ಮಧು, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಸವಿತಾ ರಮೇಶ್ ಕಂದಾಯ ಅಧಿಕಾರಿ ಶ್ರೀನಿವಾಸ್, ನವೀನ್ ಪಿ.ಎಸೈ. ಸಜಿತ್ ಕುಮಾರ್, ಪುರಸಭೆ ಸಿಬ್ಬಂದಿ ಮತ್ತು ನಾಗರಿಕರು ಇದ್ದರು.22 ಬೀರೂರು 3ಬೀರೂರು ಪಟ್ಟಣಕ್ಕೆ ಭಾನುವಾರ ಆಗಮಿಸಿದ ಕನ್ನಡ ರಥ ಯಾತ್ರೆಗೆ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜು ಮತ್ತು ತಹಸೀಲ್ದಾರ್ ಪೂರ್ಣಿಮರೊಂದಿಗೆ ಕನ್ನಡಾಂಭೆ ಪುತ್ಥಳಿಗೆ ಪುರಸಭೆ ಮುಂಭಾಗ ಪುಷ್ಪಾರ್ಚನೆಗೈದು ಸ್ವಾಗತಿಸಿದರು. ಪುರಸಭೆ ಅಧ್ಯಕ್ಷೆ ವನಿತಾಮಧು ಸೇರಿದಂತೆ ಮತ್ತಿತರರು ಇದ್ದರು.