ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜೆಡಿಎಸ್ ಕೈ ತಪ್ಪಿ ಹೋಗುವ ಹಂತದಲ್ಲಿದ್ದ ನಗರಸಭೆ ಅಧಿಕಾರ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರವೇಶದಿಂದ ದಳದಲ್ಲೇ ಉಳಿದುಕೊಂಡಿದೆ. ಅಧಿಕಾರ ಹಿಡಿಯುವುದಕ್ಕೆ ಕಾಂಗ್ರೆಸ್ ನಡೆಸಿದ ಕರಾಮತ್ತುಗಳೆಲ್ಲವೂ ಕೈಗೂಡಲೇ ಇಲ್ಲ.ಕಾಂಗ್ರೆಸ್ ಸದಸ್ಯ ಟಿ.ಕೆ. ರಾಮಲಿಂಗು ಪಕ್ಷಾಂತರ ಮಾಡಿ ಜೆಡಿಎಸ್‌ಗೆ ಜೈ ಎಂದ ಪರಿಣಾಮ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಒಂದು ಮತದಿಂದ ಜೆಡಿಎಸ್ ರೋಚಕ ಗೆಲುವು ಸಾಧಿಸಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಹತ್ತು ಮಂದಿ ಇದ್ದ ಕಾಂಗ್ರೆಸ್ ಬಲವನ್ನು 5 ಪಕ್ಷೇತರರು, ಇಬ್ಬರು ಜೆಡಿಎಸ್ ಸದಸ್ಯರು ಹಾಗೂ ಶಾಸಕ ರವಿಕುಮಾರ್ ಬೆಂಬಲದೊಂದಿಗೆ 18ಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಕೊನೆ ಹಂತದಲ್ಲಿ ಕಾಂಗ್ರೆಸ್ ಸದಸ್ಯ ಟಿ.ಕೆ. ರಾಮಲಿಂಗು ಅವರ ತಮ್ಮತ್ತ ಸೆಳೆಯುವಲ್ಲಿ ವಿಫಲರಾಗಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಕಾಂಗ್ರೆಸ್ ಕಾರ್ಯತಂತ್ರಕ್ಕೆ ಜೆಡಿಎಸ್ ರೂಪಿಸಿದ ರಣತಂತ್ರ ಫಲ ಕೊಟ್ಟಿತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ 20ನೇ ವಾರ್ಡ್‌ನ ಎಚ್.ಎಸ್.ಮಂಜು, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್‌ನ ಜಾಕಿರ್‌ಪಾಷಾ ಮತ್ತು 30ನೇ ವಾರ್ಡ್‌ನ ಜಿ.ಕೆ.ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡ್‌ನ ನಾಗೇಶ, ಹನ್ನೊಂದನೇ ವಾರ್ಡ್‌ನ ಎಂ.ಪಿ.ಅರುಣ್ ಕುಮಾರ ಉಮೇದುವಾರಿಕೆ ಸಲ್ಲಿಸಿದ್ದರು.
ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಜೆಡಿಎಸ್ ಪರವಾಗಿ ಪಕ್ಷದ 15 ಮಂದಿ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರು, ಕಾಂಗ್ರೆಸ್ ಸದಸ್ಯ ಟಿ.ಕೆ.ರಾಮಲಿಂಗು ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 19 ಸದಸ್ಯರು ಕೈಎತ್ತುವ ಮೂಲಕ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಪರವಾಗಿ ಪಕ್ಷದ 9 ಸದಸ್ಯರು, ಜೆಡಿಎಸ್‌ನ ಮೂವರು ಸದಸ್ಯರು, ಪಕ್ಷೇತರ ಐವರು ಹಾಗೂ ಶಾಸಕ ಪಿ.ರವಿಕುಮಾರ್ ಸೇರಿ 18 ಸದಸ್ಯರು ಮತ ಚಲಾಯಿಸಿದರು.ಅಂತಿಮವಾಗಿ ಜೆಡಿಎಸ್- ಬಿಜೆಪಿ ಮೈತ್ರಿಕೂಟದಿಂದ ಒಂದನೇ ವಾರ್ಡ್‌ನ ನಾಗೇಶ್ ಅಧ್ಯಕ್ಷರಾಗಿ, 11ನೇ ವಾರ್ಡ್‌ನ ಬಿಜೆಪಿ ಸದಸ್ಯ ಎಂ.ಪಿ.ಅರುಣ್‌ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಂಸದರಾಗಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಒಂದು ಮತದ ಅಂತರದಿಂದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದ ಇ.ತಿಮ್ಮಯ್ಯ, ಗಂಗಾಧರಮೂರ್ತಿ ಅವರು ಭದ್ರತೆಯ ಮೇಲುಸ್ತುವಾರಿ ವಹಿಸಿದ್ದರು.