ಸಾರಾಂಶ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು ಮತ್ತು ತಿದ್ದುಪಡಿಯ ಮಾಹಿತಿಯನ್ನು ನಿಖರವಾಗಿರಬೇಕು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು ಮತ್ತು ತಿದ್ದುಪಡಿಯ ಮಾಹಿತಿಯನ್ನು ನಿಖರವಾಗಿರಬೇಕು ಎಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಮತದಾರರ ಪಟ್ಟಿ ವೀಕ್ಷಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ ಮೋಹನ್ ರಾಜ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಯ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮತದಾರರ ಪಟ್ಟಿಯಲ್ಲಿ ಜನರು ತಮ್ಮ ಹೆಸರು ಸೇರ್ಪಡೆ, ಸ್ಥಳ ಬದಲಾವಣೆ ಮತ್ತು ತಿದ್ದುಪಡಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದಾಗ ಅವುಗಳನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಎಷ್ಟು ಜನರು ಬೇರೆ ಕಡೆ ಹೋಗಿದ್ದಾರೆ. ಹೊಸದಾಗಿ ಎಷ್ಟು ಜನ ಸೇರ್ಪಡೆಯಾದರು ಎಂಬ ಮಾಹಿತಿಯನ್ನು ತಮ್ಮಲ್ಲಿ ಇರಬೇಕೆಂದು ಹೇಳಿದರು.
ತಾವು ಈ ಕೆಲಸವನ್ನು ಸರಿಯಾಗಿ ಮಾಡಿರುವ ಕುರಿತು ನನಗೆ ಸ್ಯಾಂಪಲ್ ಬೇಕು. ತಾವು ನೀಡಿದ ಮಾಹಿತಿ ಸರಿಯಾಗಿರುವುದು ಮನೆಗಳಿಗೆ ಭೇಟಿ ನೀಡಿದಾಗ ನನಗೆ ತಿಳಿಯುತ್ತದೆ. ಮತದಾರರ ಪಟ್ಟಿಯ ಕುರಿತು ಮಾಹಿತಿ ಪಡೆಯಲು ಇದು ನನ್ನ ಎರಡನೇ ಭೇಟಿಯಾಗಿದೆ. ಬಿಎಲ್‌ಒಗಳು ಚುನಾವಣೆ ಬಂದಾಗ ಮಾತ್ರ ಸರಿಯಾಗಿ ಕೆಲಸ ಮಾಡುತ್ತಾರೆ. ಹೀಗಾಗಿ, ಆಯಾ ತಾಲೂಕಿನ ತಹಸೀಲ್ದಾರರು ಮತದಾರರ ಪಟ್ಟಿಯ ನಿಖರವಾದ ಮಾಹಿತಿ ತಮಗೆ ತಿಳಿದಿರಬೇಕು ಎಂದು ಹೇಳಿದರು.ಈ ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಚುನಾವಣಾ ತಹಸೀಲ್ದಾರ್ ನಾಗರಾಜ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರರು ಉಪಸ್ಥಿತರಿದ್ದರು.
ಸಭೆಯ ನಂತರ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ತಾಲೂಕಿನ ತಳಕಲ್ ಗ್ರಾಮಕ್ಕೆ ಕ್ಷೇತ್ರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಮೃತರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಬಗ್ಗೆ ಖುದ್ದಾಗಿ ಪರಿಶೀಲಿಸಿ, ಪಟ್ಟಿಯ ಮಹಿತಿಯನ್ನು ಸ್ಪಷ್ಟ ಹಾಗೂ ನಿಖರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.