ಸಾರಾಂಶ
ಲಕ್ಷ್ಮೇಶ್ವರ: ಮನುಷ್ಯ ಜೀವನದಲ್ಲಿ ಧರ್ಮ,ಅರ್ಥ, ಕಾಮ,ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಂಪಾದಿಸಬೇಕು. ಇವುಗಳ ಗಳಿಕೆಗೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಲಗಳು ಹೆದ್ದಾರಿಯಾಗಿವೆ ಎಂದು ಸವಣೂರಿನ ಸಾಹಿತಿ-ಚಿಂತಕ ಡಾ. ಗುರುಪಾದಯ್ಯ ಸಾಲಿಮಠ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಜರುಗಿದ ಶ್ರಾವಣ ಸಂಜೆ ಕಾರ್ಯಕ್ರಮದ ಸರಣಿಯಲ್ಲಿ ಭಾನುವಾರ ಷಟ್ ಸ್ಥಲಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ವೀರಶೈವ ಧರ್ಮದ ಉಗಮ, ಉತ್ಥಾನ, ಪುನರುತ್ಥಾನ ಮತ್ತು ಜಾಗೃತಿಯ ಹಂತಗಳಲ್ಲಿ ಬೆಳೆದು ಬಂದಿದ್ದು, ಮನುಷ್ಯ ಮಾನವನಾಗಿ, ಮಾನವ ಮಹಾದೇವನಾಗುವ ಬಗೆಯನ್ನು ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ನಿಲುವಳಿ ಕೊಟ್ಟದ್ದು ಸ್ಮರಣೀಯ. ಬದುಕಿನ ಸಾರ್ಥಕತೆಗೆ ಒಂದಿಷ್ಟಾದರೂ ಒಳಿತನ್ನು ಬಯಸಿ ಮುಕ್ತಿ ಮಾರ್ಗ ಪಡೆಯುವ ನಿಟ್ಟಿನಲ್ಲಿ ರತ್ನತ್ರಯಗಳ ಆಚರಣೆ ಆವಶ್ಯಕವಾಗಿದೆ. ಹುಟ್ಟು-ಸಾವುಗಳ ಮಧ್ಯೆ ಮನುಷ್ಯ ಪಾಪ-ಪುಣ್ಯಗಳ ಪರಿಧಿಯಲ್ಲಿ ಬದುಕುವವನಾಗಿದ್ದಾನೆ. ಆತ ಪುಣ್ಯವನ್ನೇ ಮಾಡಿ, ಪುಣ್ಯಾತ್ಮ ಎನಿಸಿಕೊಳ್ಳಬೇಕಾದರೆ ರತ್ನತ್ರಯಗಳ ಅರಿವು ಮತ್ತು ಆಚರಣೆ ಅವಶ್ಯಕವಾಗಿದೆ. ಸುಸಂಸ್ಕೃತ ಮತ್ತು ಸಂಸ್ಕಾರಯುಕ್ತ ಬದುಕಿಗೆ ಇವುಗಳು ಪ್ರೇರಕವಾಗಿವೆ ಎಂದರು.ಗುರು,ಲಿಂಗ,ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಇವು ಅಷ್ಟಾವರಣಗಳಾದರೆ,ಲಿಂಗಾಚಾರ, ಸದಾಚಾರ,ಶಿವಾಚಾರ,ಗಣಾಚಾರ ಮತ್ತು ಭ್ರತ್ಯಾಚಾರಗಳು ಪಂಚಾಚಾರಗಳಾಗಿವೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಇವುಗಳೆ ಷಟ್ ಸ್ಥಲಗಳಾಗಿವೆ. ಮನುಷ್ಯ ಜೀವನಕ್ಕೆ ಅಷ್ಟಾವರಣಗಳೇ ಅಂಗವಾಗಿ ಪಂಚಾಚಾರಗಳೇ ಪ್ರಾಣವಾಗಿ ಮತ್ತು ಷಟ್ ಸ್ಥಲಗಳೇ ಆತ್ಮವಾಗಿವೆ.ಇವುಗಳನ್ನು ನಿತ್ಯ ಜೀವನದಲ್ಲಿ ಸಾಧನೆ ಮಾಡಿಕೊಂಡು ಮನುಷ್ಯ ಮುಕ್ತಿ ಹೊಂದಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಆಧ್ಯಾತ್ಮಿಕ ಪರಂಪರೆ ಬಹುತರವಾದ ಧರ್ಮ ಸೂಕ್ಷ್ಮಗಳನ್ನು ಜನಾಂಗಕ್ಕೆ ತಿಳಿಸಿಕೊಟ್ಟಿದೆ. ಇವುಗಳ ಗಳಿಕೆ-ಬಳಕೆ ಪ್ರತಿಯೊಬ್ಬರಿಂದಲೂ ಆಗಬೇಕಿದೆ. ಆಧುನಿಕ ಜಗತ್ತಿನಲ್ಲಿ ಸಾಗುತ್ತಿರುವ ಮನುಷ್ಯ ಕೇವಲ ಯಾಂತ್ರಿಕತೆಗೆ ಒತ್ತು ಕೊಟ್ಟು ಮಾನವೀಯತೆ ಮರೆಯುತ್ತಿದ್ದಾನೆ. ಆದ್ದರಿಂದ ಧರ್ಮವಂತರು ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಗಳ ಉಳಿವಿಗಾಗಿ ನಿರಂತರ ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು.ಕಾರ್ಯುಕ್ರಮದ ಅಧ್ಯಕ್ಷತೆಯನ್ನು ಸಂಖ್ಯಾಶಾಸ್ತ್ರಜ್ಞ, ನಿವೃತ್ತ ಶಿಕ್ಷಕ ಎಸ್. ಎಫ್.ಘಂಟಾಮಠ ವಹಿಸಿದ್ದರು. ಎಸ್.ಎಸ್. ಪೂಜಾರ, ಎಂ.ಎ.ತಹಸೀಲ್ದಾರ, ಎ.ಎಂ.ಮಠದ, ಎಂ.ಪಿ. ಹುಬ್ಬಳ್ಳಿ,ಶರಣಪ್ಪ ಹಸರಡ್ಡಿ ಮಾತನಾಡಿದರು.
ಲಲಿತಾ ಕೆರಿಮನಿ,ಪಾರ್ವತಿ ಕಳ್ಳಿಮಠ, ರತ್ನಾ ಕರ್ಕಿ, ಪ್ರತಿಮಾ ಮಹಾಜನಶೆಟ್ಟರ, ಅರುಂಧತಿ ಬಿಂಕದಕಟ್ಟಿ, ನಿರ್ಮಲಾ ಅರಳಿ ಇದ್ದರು. ಮಹಾನಂದಾ ಕೊಣ್ಣೂರ ನಿರೂಪಿಸಿದರು. ಗಿರಜಾ ಜಗಲಿ ಪ್ರಾರ್ಥನೆ ಮಾಡಿದರು. ಪ್ರೀಯಾ ಕುಂಬಿ ಸ್ವಾಗತಿಸಿದರು. ಪ್ರೇಮಾ ಹತ್ತಿಕಾಳ ವಂದಿಸಿದರು.