ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ವಿ.ಸಿ.ಕಾಲೋನಿ ಹಳೆ ಅಂಚೆ ಕಚೇರಿ ರಸ್ತೆಗೆ ಕೊನೆಗೂ ಚಾಲನೆ ದೊರಕಿದೆ. ತಾಲೂಕಿನ ಕೆನ್ನಾಳು ಗ್ರಾಮದ ಜಮೀನಿನ ಮಾಲೀಕರು ಈ ರಸ್ತೆ ನಿರ್ಮಾಣಕ್ಕೆ ಐದಾರು ಬಾರಿ ಅಡ್ಡಿ ಉಂಟು ಮಾಡಿದ್ದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಬಹಳ ತೊಂದರೆಯಾಗಿತ್ತು.ಆದರೆ, ಇದೀಗ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರು ಖುದ್ದು ನಿಂತು ರಸ್ತೆ ಕಾಮಗಾರಿಗೆ ಚಾಲನೆ ಕೊಡಿಸುವ ಮೂಲಕ ರಸ್ತೆಗೆ ಮುಕ್ತಿ ದೊರಕಿದಂತಾಗಿದೆ. ಸರ್ಕಾರಿ ಸರ್ವೇಯರ್ ನೀಡಿರುವ ನಕ್ಷೆಯಲ್ಲಿ ಕೆ.ಆರ್.ಎಸ್ ಮುಖ್ಯ ರಸ್ತೆಯಿಂದ ವಿ.ಸಿ.ಕಾಲೋನಿಯ ಹಳ್ಳದವರೆಗೆ 30 ಅಡಿ ರಸ್ತೆ ಗುರುತು ಮಾಡಲಾಗಿದೆ. ಜತೆಗೆ ಈ ರಸ್ತೆ ಅಜುಬಾಜಿನ ನಿವಾಸಿಗಳು ನೆನಗುದಿಗೆ ಬಿದ್ದಿರುವ ಈ ರಸ್ತೆ ನಿರ್ಮಾಣ ಮಾಡುವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರು.
ಇದರನ್ವಯ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 3.30 ಲಕ್ಷರು. ವೆಚ್ಚದಲ್ಲಿ ಕೆಆರ್‌ಎಸ್ ಮುಖ್ಯ ರಸ್ತೆಯಿಂದ ವಿ.ಸಿ.ಕಾಲೋನಿಯ ಚಲುವೇಗೌಡರ ಮನೆವರೆಗೆ 100 ಮೀ ರಸ್ತೆಗೆ ಚಾಲನೆ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದರು.ಈ ಹಿಂದೆ ಚರಂಡಿ, ವಿದ್ಯುತ್ ಕಂಬ, ನೀರಿನ ಪೈಪ್ ಲೈನ್ ಅಳವಡಿಸಿ ಈ ರಸ್ತೆಗೆ ಮೆಟ್ಲಿಂಗ್ ಮಾಡಲಾಗಿದೆ. ಒಂದು ವೇಳೆ ಜಮೀನಿನ ಮಾಲೀಕರಿಗೆ ಈ ರಸ್ತೆ ಜಾಗ ಸೇರಿದ್ದರೆ ಅವರು ದಾಖಲಾತಿ ತಂದು ನೀಡಲಿ ಪರಿಶೀಲಿಸಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.
ಆದರೆ, ಇದು ಹಿಡುವಳಿ ಜಮೀನಾಗಿದ್ದು, ನಮಗೆ ಸೇರಿದೆ. 8 ಅಡಿ ಗಾಡಿ ಜಾಡು ಬಿಡಲಾಗಿದೆ. ಆದರೆ, ರಸ್ತೆಗೆ ಚಾಲನೆ ನೀಡುವ ಮೂಲಕ ಪುರಸಭೆ ಮುಖ್ಯಾಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಮೀನಿನ ಮಾಲೀಕ ದೇವಾನಂದ್ ತಿಳಿಸಿದರು.ಒಟ್ಟಾರೆ ಈ ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯ ಮುಖಂಡರಾದ ಚಲುವೇಗೌಡ, ಜಯರಾಂ, ಅನಂತ ಪ್ರಕಾಶ್ ಹೆಗಡೆ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.