ಬ್ರಿಟಿಷರ ಕಾಲದಿಂದಲೂ ಕಾಮಗಾರಿ ಕಾಣದ ರಸ್ತೆ

| Published : Oct 21 2025, 01:00 AM IST

ಬ್ರಿಟಿಷರ ಕಾಲದಿಂದಲೂ ಕಾಮಗಾರಿ ಕಾಣದ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವೇ ಗತಿಸಿದರೂ ಹಿರೇಮಾಗಿಯಿಂದ ರಾಮಥಾಳ ರಸ್ತೆ ಸೌಲಭ್ಯ ನಿರ್ಮಾಣವಾಗದಿರುವುದು ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ. ರಸ್ತೆ ಇಲ್ಲದ್ದರಿಂದ ರೈತರು ಪರರ ಹೊಲದಲ್ಲಿ ಕಳ್ಳರಂತೆ ಸಂಚರಿಸುವ ದುಃಸ್ತಿತಿ ಬಂದಿದೆ. ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ರೈತರು ಹೋರಾಟಕ್ಕೆ ನಿರ್ಧರಿಸಿದ್ದಾರೆ.

ನರಸಿಂಹಮೂರ್ತಿ

ಕನ್ನಡಪ್ರಭ ವಾರ್ತೆ ಅಮೀನಗಡ

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವೇ ಗತಿಸಿದರೂ ಹಿರೇಮಾಗಿಯಿಂದ ರಾಮಥಾಳ ರಸ್ತೆ ಸೌಲಭ್ಯ ನಿರ್ಮಾಣವಾಗದಿರುವುದು ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ. ರಸ್ತೆ ಇಲ್ಲದ್ದರಿಂದ ರೈತರು ಪರರ ಹೊಲದಲ್ಲಿ ಕಳ್ಳರಂತೆ ಸಂಚರಿಸುವ ದುಃಸ್ತಿತಿ ಬಂದಿದೆ. ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ರೈತರು ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಹುನಗುಂದ ತಾಲೂಕು ಹಿರೇಮಾಗಿ ಗ್ರಾಮದಿಂದ ರಾಮಥಾಳ ಗ್ರಾಮಕ್ಕೆ ಹೋಗುವ ಒಳರಸ್ತೆ, ಅಂದಾಜು 15 ಕಿಮೀ ಇದ್ದು, ಸಾವಿರಾರು ಎಕರೆ ನೀರಾವರಿ ಕೃಷಿ ಭೂಮಿ ಇದ್ದು, ಸಾವಿರಾರು ರೈತರು ಹೊಲಕ್ಕೆ ಹೋಗಲು, ಎತ್ತು, ಕೃಷಿ ಸಾಮಗ್ರಿ ಒಯ್ಯಲು ಹಾಗೂ ಕೃಷಿಉತ್ಪನ್ನ ಮಾರುಕಟ್ಟೆಗೆ ಉತ್ಪನ್ನ ಒಯ್ಯಲು ಭಾರೀ ತೊಂದರೆಯಾಗುತ್ತಿದೆ.ಸ್ವಾತಂತ್ರ್ಯಪೂರ್ವದಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಕಲಾದಗಿ ಹಿರೇಮಾಗಿ ಗ್ರಾಮದಿಂದ ರಾಮಥಾಳ ಗ್ರಾಮಕ್ಕೆ ಹೋಗುವ ಒಳರಸ್ತೆಯ ನಕ್ಷೆ ಹಿಡಿದುಕೊಂಡು ರಸ್ತೆ ಅಭಿವೃದ್ದಿಪಡಿಸುವಂತ ಹಲವು ಬಾರಿ ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರೂ ಇದುವರೆಗೂ ರಸ್ತೆಯ ಅಭಿವೃದ್ಧಿ ಮಾತೇ ಇಲ್ಲ. ರಸ್ತೆ ಈಗ ಸಂಪೂರ್ಣ ಮುಳ್ಳು-ಕಂಠಿಗಳಿಂದ ಆವೃತವಾಗಿದ್ದು, ಕೆಲವು ರೈತರು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ.

ಹಿರೇಮಾಗಿ ಗ್ರಾಮದಿಂದ ರಾಮಥಾಳ ಗ್ರಾಮಕ್ಕೆ ಹೋಗುವ ಈ ಒಳ ರಸ್ತೆ, ಅರ್ಧ ಹಿರೇಮಾಗಿ ಗ್ರಾಮ ಪಂಚಾಯತಿ, ಅರ್ಧ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ. ಹಲವಾರು ಬಾರಿ ರೈತರು ಮೌಖಿಕವಾಗಿ, ಈ ಎರಡೂ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಗಮನಕ್ಕೆ ಹಾಗೂ ಬಾಗಲಕೋಟೆ ಮತಕ್ಷೇತ್ರದ ಶಾಸಕ ಎಚ್.ವೈ. ಮೇಟಿಯವರಿಗೆ ಮೌಖಿಕವಾಗಿ ಹೇಳಿ ಹೇಳುತ್ತಾ ಬಂದರೂ ಇದುವರೆಗೂ, ಯಾವುದೇ ಪ್ರಗತಿಯಾಗಿಲ್ಲ.

ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ರೈತರು ಲಿಖಿತ ಪತ್ರಗಳ ಮೂಲಕ ವಿನಂತಿಸಿಕೊಂಡಿದ್ದು, ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ರೈತರಾದ ಲಿಂಗಪ್ಪ ಹುನಗುಂದ, ಶಿವಪ್ಪ ಯ.ಮೇಟಿ, ಬಂಗಾರೆಪ್ಪ ಜೂಗನ್ನವರ, ಎಂ.ಎಂ. ಗಡೇದ, ಬಸಪ್ಪ ಕೆಲೂರ, ಬಸಪ್ಪ ಮೇಟಿ, ಐ.ಎನ್.ಪೂಜಾರಿ, ಆರ್.ಎನ್.ಗೌಡರ್, ಕೆ.ಎಚ್. ಕೆಲೂರ, ದಂಡಪ್ಪ ತಳವಾರ, ಹನುಮಂತ ಘಟ್ನೂರ ಮುಂತಾದ ನೂರಾರು ರೈತರು ಎಚ್ಚರಿಸಿದ್ದಾರೆ.ನೆರೆ ಬಂದಾಗ ಸಂಕಷ್ಟ: ಪ್ರತಿ ಬಾರಿ ಗ್ರಾಮ ಪಂಚಾಯತಿ, ಲೋಕಸಭಾ ಹಾಗೂ ವಿಧಾನಸಭಾ ಮುಂತಾದ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬ್ರಿಟೀಷರ ಕಾಲದ ರಸ್ತೆ ಇದುವರೆಗೂ ಕನುಷ್ಠ ಕಚ್ಚಾರ ರಸ್ತೆಯನ್ನೂ ಮಾಡಿಲ್ಲ. ಸಮೀಪದ ಮಲಪ್ರಭ ನದಿ ಉಕ್ಕಿಹರಿದು ನೆರಬಂದರೆ ಬೇವಿನಾಳ ರಾಮಥಾಳ ರಸ್ತೆ ಸಂಪರ್ಕ ಕಡಿದು ಸುಮಾರು 25 ಕಿ.ಮೀ ಸುತ್ತು ಹಾಕಿಕೊಂಡು ಬರುವ ಪರಿಸ್ಥಿತಿ ಇದೆ. ಈ ರಸ್ತೆಯಿಂದ ಬೇವಿನಾಳ, ಹಿರೇಮಾಗಿ, ರಾಮಥಾಳ ಗ್ರಾಮಗಳ ಜನತೆಗೆ ಸಂಚರಿಸಲು ಅನುಕೂಲವಾಗುತ್ತಿದ್ದು, ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕೆಂದು ಬೇವಿನಾಳ ಗ್ರಾಮದ ರೈತರಾದ ಲಿಂಗಪ್ಪ ಹುನಗುಂದ ಅಳಲು ತೋಡಿಕೊಳ್ಳುತ್ತಾರೆ.