ಕೆಸರುಗದ್ದೆಯಂತಾದ ಕಳಲಕೊಂಡ ಗ್ರಾಮದ ರಸ್ತೆ, ಸಾರ್ವಜನಿಕರ ಆಕ್ರೋಶ

| Published : Apr 28 2025, 11:52 PM IST

ಕೆಸರುಗದ್ದೆಯಂತಾದ ಕಳಲಕೊಂಡ ಗ್ರಾಮದ ರಸ್ತೆ, ಸಾರ್ವಜನಿಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಹದಗೆಟ್ಟ ರಸ್ತೆ ಕುರಿತು ಪಿಡಬ್ಲ್ಯುಡಿ ಇಲಾಖೆಗೆ ಸಂಪರ್ಕಿಸಿದರೆ, ಈ ರಸ್ತೆಯು ಜಿಪಂ, ಗ್ರಾಪಂಗೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸುತ್ತಾರೆ. ಜಿಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ್ದು ಎನ್ನುತ್ತಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವರಾಜ ಯಲವಗಿಸವಣೂರು: ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಎಡವಟ್ಟಿನಿಂದಾಗಿ ತಾಲೂಕಿನ ಕಳಲಕೊಂಡ ಗ್ರಾಮದ ಬಸ್ ನಿಲ್ದಾಣದಿಂದ ತಳ್ಳಿಹಳ್ಳಿ ಮಾರ್ಗದಿಂದ ಜಿಲ್ಲಾ ಕೇಂದ್ರ ಹಾವೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಗ್ರಾಮದ ಬಸ್ ನಿಲ್ದಾಣದಿಂದ ಗ್ರಾಮದ ಗಡಿ ಮುಕ್ತಾಯದವರೆಗೂ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಂತಾಗಿದೆ. ಈ ಕುರಿತು ಪಿಡಬ್ಲ್ಯುಡಿ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಆದರೆ, ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಹದಗೆಟ್ಟ ರಸ್ತೆ ಕುರಿತು ಪಿಡಬ್ಲ್ಯುಡಿ ಇಲಾಖೆಗೆ ಸಂಪರ್ಕಿಸಿದರೆ, ಈ ರಸ್ತೆಯು ಜಿಪಂ, ಗ್ರಾಪಂಗೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸುತ್ತಾರೆ. ಜಿಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ್ದು ಎನ್ನುತ್ತಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಮೊಬೈಲ್ ಕಂಪನಿ ಹಾವಳಿ: ಮೊದಲೇ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟು ಅಲ್ಪ ಮಳೆಯಾದರೂ ಮಹಿಳೆಯರು, ಮಕ್ಕಳು, ವಾಹನ ಸವಾರರು ಬಿದ್ದು ಎದ್ದು ತೆರಳುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಮೊಬೈಲ್ ಕಂಪನಿಯವರು ಹಾಳಾದ ರಸ್ತೆಯನ್ನು ಅಗೆದು ತಮ್ಮ ನೆಟ್‌ವರ್ಕ್ ಸೇವೆ ಉತ್ತಮಗೊಳಿಸಲು ಕೇಬಲ್ ಅಳವಡಿಸಿದ್ದಾರೆ. ಕೇಬಲ್ ಅಳವಡಿಕೆಗಾಗಿ ಸಂಬಂಧಪಟ್ಟ ಇಲಾಖೆಯು ಗ್ರಾಪಂ ಪರವಾನಗಿ ಪಡೆದಿರುವುದು ಕೃಷಿ ಭೂಮಿಯಲ್ಲಿ. ಆದರೆ, ಕೇಬಲ್ ಅಳವಡಿಸಿರುವುದು ರಸ್ತೆಯಲ್ಲಿ ಎಂದು ಗ್ರಾಪಂ ಅಧಿಕಾರಿಗಳು ತಿಳಿಸುತ್ತಾರೆ.

ಖಾಸಗಿ ಕಂಪನಿಗಳು ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕರ ಉಪಯುಕ್ತ ರಸ್ತೆಯನ್ನು ಮತ್ತಷ್ಟು ಹಾಳು ಮಾಡಿದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿದೆ. ಜಲ್ಲಾಪುರ ಗ್ರಾಪಂ ವತಿಯಿಂದ ಖಾಸಗಿ ಮೊಬೈಲ್ ಕಂಪನಿ ಪಡೆದ ಪರವಾನಗಿ ಕುರಿತು ತನಿಖೆ ಕೈಗೊಳ್ಳಬೇಕು ಎಂಬುದು ಕಳಲಕೊಂಡ ಗ್ರಾಮಸ್ಥರ ಬೇಡಿಕೆಯಾಗಿದೆ. ರಸ್ತೆ ಹಾಳು ಮಾಡಿದ ಖಾಸಗಿ ಕಂಪನಿ ವಿರುದ್ಧ ಸೂಕ್ತ ಕಾನೂನು ಕೈಗೊಂಡು ಹಾನಿಯನ್ನು ಭರಣ ಮಾಡಿಸಬೇಕು. ಕೂಡಲೇ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಪ್ಪಿಸ್ಥರ ವಿರುದ್ಧ ಕ್ರಮ: ಮೊಬೈಲ್ ಕಂಪನಿ ಕೇಬಲ್ ಅಳವಡಿಕೆಗಾಗಿ ಪರವಾನಗಿಗಾಗಿ ಮನವಿಯನ್ನು ಸಲ್ಲಿಸಿದ್ದರು. ಈ ಕುರಿತು ಆಡಳಿತ ಮಂಡಳಿ ಹಾಗೂ ಸರ್ಕಾರದ ಷರತ್ತುಗಳ ಅನ್ವಯ ಪರವಾನಗಿ ನೀಡಲಾಗಿತ್ತು. ಆದರೆ, ಕಂಪನಿಯವರು ರಸ್ತೆಗೆ ಹೊಂದಿಕೊಂಡು ಅಗೆದು ಕೇಬಲ್ ಅಳವಡಿಸಿರುವ ಹಿನ್ನೆಲೆ ರಸ್ತೆ ಮತ್ತಷ್ಟು ಹಾಳಾಗಿದೆ. ಈ ಕುರಿತು ತಪ್ಪಿಸ್ಥರ ವಿರುದ್ಧ ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಲ್ಲಾಪುರ ಗ್ರಾಪಂ ಪಿಡಿಒ ವೀರೇಶ ಅವಾರಿ ತಿಳಿಸಿದರು.ಹೋರಾಟ ಅನಿವಾರ್ಯ: ರಸ್ತೆ ಪಿಡಬ್ಲ್ಯುಡಿಗೆ ಸೇರಿದ್ದು. ಖಾಸಗಿ ಮೊಬೈಲ್ ಕಂಪನಿಗೆ ರಸ್ತೆ ಅಗೆಯಲು ಪರವಾನಗಿ ನೀಡಿದ್ದು ಮಾತ್ರ ಗ್ರಾಪಂ. ಇದು ಹೇಗೆ ಸಾಧ್ಯ? ಗ್ರಾಪಂ ಬೊಕ್ಕಸಕ್ಕೆ ಹಣ ಕಟ್ಟಿಸಿಕೊಂಡಿದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಳ್ಳುವುದು ಅವಶ್ಯವಾಗಿದೆ. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಕಳಲಕೊಂಡ ನಿವಾಸಿ ಗಂಗಪ್ಪ ಹರಿಜನ ತಿಳಿಸಿದರು.