ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣ ಪುರಸಭೆ ಮುಂಭಾಗದ ಮಹಾತ್ಮ ಗಾಂಧಿ ವೃತ್ತದ ಮೂಲಕ ಸುಭಾಷ್ ವೃತ್ತ ಸಾಗಿ ಸಾರ್ವಜನಿಕ ಆಸ್ಪತ್ರೆ ತನಕ ದೊಡ್ಡ ದೊಡ್ಡ ಗುಂಡಿ, ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ರಸ್ತೆ, ಅರಕಲಗೂಡು ರಸ್ತೆ ಸಂಪೂರ್ಣ ಹಾಳಾಗಿದ್ದು ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಸಮಸ್ಯೆ ಕುರಿತಂತೆ ಕಳೆದ ಒಂದು ವರ್ಷದಲ್ಲಿ ಎರಡು ಮೂರು ಬಾರಿ ಪತ್ರಿಕೆಗಳಲ್ಲಿ ವರದಿ ಮಾಡಿ ಪುರಸಭೆ ಮುಖ್ಯಾಧಿಕಾರಿ, ಹಾಸನ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಎಇಇಗೆ ಮಾಹಿತಿ ನೀಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಪ್ರಭಾವಿ ಶಾಸಕರು, ರಾಜ್ಯದಲ್ಲಿ ಆಡಳಿತ ಪಕ್ಷದ ಸಂಸದರು ಇದ್ದರೂ ಈ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಸಾಧ್ಯ ಆಗುತ್ತಿಲ್ಲವೇ ಎಂದು ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ಇನ್ನಿತರ ಕಡೆಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಾಲಕರು ಕೇಳುವ ಪ್ರಶ್ನೆಗೆ ಪುರಸಭೆ ಮುಖ್ಯಾಧಿಕಾರಿಯೇ ಉತ್ತರ ನೀಡಬೇಕು. ಶಾಸಕ ರೇವಣ್ಣ ಅವರ ಬಳಿ ಸಮಸ್ಯೆ ಕುರಿತಂತೆ ಗಮನ ಸೆಳೆದಾಗ ಸರ್ಕಾರ ಹಣ ನೀಡುತ್ತಿಲ್ಲ ನಾನೇನು ಮಾಡಲಿ ಎಂದಿದ್ದರು. ಸಂಸದರು ಈ ರಸ್ತೆ ಗುಂಡಿಗಳನ್ನು ಮುಚ್ಚಿಸಲು ೪ ಕೋಟಿ ಬಿಡುಗಡೆ ಆಗಿದೆ ಕೆಲಸ ಪ್ರಾರಂಭಿಸಲಾಗುವುದು ಎಂದು ವರ್ಷದ ಹಿಂದೆ ಹೇಳಿದ್ದರು. ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್‌ ವರ್ಷಗಳ ಹಿಂದೆ ಟೆಂಡರ್ ಕರೆದಿದ್ದೇವೆ ಎಂದಿದ್ದರು, ನಂತರ ಯಾರೂ ಟೆಂಡರ್ ಹಾಕಿಲ್ಲ ಎಂದರು.

ಪುರಸಭೆ ವ್ಯಾಪ್ತಿಯ ಮಂಗಳಾಪುರದಿಂದ ಅರಕಲಗೂಡು ರಸ್ತೆಯ ಕೈಗಾರಿಕಾ ಬಡಾವಣೆವರೆಗೆ ಗುಂಡಿ ಮುಚ್ಚಲು ೧೮ ಲಕ್ಷಕ್ಕೆ ಟೆಂಡರ್‌ ಆಗಿದೆ. ಇನ್ನು ಒಂದು ವಾರದಲ್ಲಿ ಕೆಲಸ ಪ್ರಾರಂಭವಾಗುತ್ತದೆ ಎಂದು ತಿಂಗಳ ಹಿಂದೆ ಹೇಳಿದ್ದರು ಇನ್ನೂ ಕೆಲಸ ಪ್ರಾರಂಭವಾಗಿಲ್ಲ. ಈ ರಸ್ತೆಯಲ್ಲಿ ಓಡಾಡುವ ವಾಹನಗಳ ಮಾಲೀಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಭಾವಿ ನಾಯಕರಿದ್ದರೂ ಪಟ್ಟಣದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಮುಖಂಡರು ವ್ಯಂಗ್ಯವಾಡುತ್ತಿದ್ದಾರೆ.