ಸಾರಾಂಶ
ಬೆಳ್ಳಂಬೆಳಿಗ್ಗೆ ಪುರಸಭೆಯ ಜೆಸಿಬಿ ಯಂತ್ರಗಳು ಘರ್ಜಿಸುವ ಮೂಲಕ ಅಕ್ರಮವಾಗಿ ನಿರ್ಮಿಸಿಕೊಂಡಿದ್ದರೆನ್ನಲಾದ ಗುಡಿಸಲುಗಳನ್ನು ನೆಲಸಮಗೊಳಿಸಿದವು. ಪುರಸಭೆ ವ್ಯಾಪ್ತಿಗೊಳಪಡುವ ಗೋಪಾಲಪುರ ಗ್ರಾಮದ ಸರ್ವೆ ನಂ.7ರಲ್ಲಿ ಕೆಲವರು ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಕೆಡಿಪಿ ಸಭೆಯಲ್ಲಿ ನಡೆದ ನಿರ್ಣಯದಂತೆ ನೆಲಸಮಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಬೆಳ್ಳಂಬೆಳಿಗ್ಗೆ ಪುರಸಭೆಯ ಜೆಸಿಬಿ ಯಂತ್ರಗಳು ಘರ್ಜಿಸುವ ಮೂಲಕ ಅಕ್ರಮವಾಗಿ ನಿರ್ಮಿಸಿಕೊಂಡಿದ್ದರೆನ್ನಲಾದ ಗುಡಿಸಲುಗಳನ್ನು ನೆಲಸಮಗೊಳಿಸಿದವು.ಪುರಸಭೆ ವ್ಯಾಪ್ತಿಗೊಳಪಡುವ ಗೋಪಾಲಪುರ ಗ್ರಾಮದ ಸರ್ವೆ ನಂ. 7 ರಲ್ಲಿ ಕೆಲವರು ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಕೆಡಿಪಿ ಸಭೆಯಲ್ಲಿ ನಡೆದ ನಿರ್ಣಯದಂತೆ ನೆಲಸಮಗೊಳಿಸಲಾಯಿತು.
ಇತ್ತೀಚೆಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗೋಪಾಲಪುರ ಗ್ರಾಮದ ಸರ್ವೆ ನಂ.7 ರಲ್ಲಿ ನಿರ್ಮಿಸಿಕೊಂಡಿದ್ದ ಅಕ್ರಮ ಗುಡಿಸಲು ನಿರ್ಮಾಣ ತೆರವುಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ ಅಕ್ರಮ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಪೋಲೀಸರ ಸರ್ಪಗಾವಲಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಗುಡಿಸಲುಗಳನ್ನು ಬೆಳಗ್ಗೆ 6.30ಕ್ಕೆ ಸಂಪೂರ್ಣವಾಗಿ ನೆಲಸಮಗೊಳಿಸಿದರು.ಈ ವೇಳೆ ಸ್ಥಳದಲ್ಲಿದ್ದ ವಕೀಲ ಪ್ರಕಾಶ್, ಗುಡಿಸಲು ತೆರವು ಕಾರ್ಯಾಚರಣೆ ಮಾಡುವ ಮೂಲಕ ಮಾದಿಗ ಸಮುದಾಯಕ್ಕೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಟಿ.ಎನ್. ನಂಜುಂಡಸ್ವಾಮಿ ಎಂಬವರು ಹುಲ್ಲಹಳ್ಳಿ ನಾಲೆಯನ್ನು ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿಕೊಂಡಿಲ್ಲವೇ ಅದನ್ನು ಬಿಟ್ಟು ದಲಿತರು ನಿರ್ಮಿಸಿಕೊಂಡಿರುವ ಗುಡಿಸಲನ್ನು ನೆಲಸಮಗೊಳಿಸಿದ್ದೀರಿ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.ಮಾದಿಗ ಜನಾಂಗದ ಬಗ್ಗೆ ಸಚಿವ ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ಹಾಗೂ ಇನ್ನಿತರೆ ರಾಜಕಾರಣಿಗಳು ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಗುಡಿಸಲು ನಿರ್ಮಿಸಿಕೊಳ್ಳಲಾಗಿದ್ದ ಜಾಗದಲ್ಲಿ ಅಳವಡಿಸಿದ್ದ ಡಾ. ಬಾಬು ಜಗಜೀವನರಾಂ ಗೋಪಾಲಪುರ ಹೊಸ ಬಡಾವಣೆ ಎಂಬ ಹೆಸರಿನ ನಾಮಫಲಕ ತೆರವುಗೊಳಿಸುವ ವೇಳೆ ಕೆಲ ಕಾಲ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ವಿರೋಧ ವ್ಯಕ್ತಪಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದರು.ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್, ಎಸ್ಪಿ ಎನ್. ವಿಷ್ಣುವರ್ಧನ್, ಡಿವೈಎಸ್ಪಿ ರಘು, ಸಿಪಿಐ ಧನಂಜಯ, ಮನೋಜ್ ಕುಮಾರ್, ಆನಂದ್ ಕುಮಾರ್, ಎಸ್ಐ ಜಗದೀಶ್ ದೂಳ್ ಶೆಟ್ಟಿ ಈ ವೇಳೆ ಹಾಜರಿದ್ದು, ತೆರವು ಕಾರ್ಯಾಚರಣೆಗೆ ಬಂದೋಬಸ್ತ್ ನೀಡಿದರು.