ಸಾರಾಂಶ
ಕಾರಟಗಿಯಲ್ಲಿ ಬಾಲಮೇಳ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರಟಗಿಖಾಸಗಿ ಹಾಗೂ ಕಾನ್ವೆಂಟ್‌ಗಳಿಗೆ ಕಡಿಮೆಯಿಲ್ಲದ ರೀತಿಯಲ್ಲಿ ರಾಜ್ಯದ ಎಲ್ಲೆಡೆ ಅಂಗನವಾಡಿಗಳಲ್ಲಿಯೂ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಬಾಲ್ಯದಿಂದಲೇ ಶಾಲಾ ಪೂರ್ವ ಶಿಕ್ಷಣ ಕಲಿಸಲು ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ ಅಧಿಕಾರಿ ವಿರೂಪಾಕ್ಷಿ ಸ್ವಾಮಿ ಹೇಳಿದರು.
ಇಲ್ಲಿನ ಸುಂಕ್ಲಮ್ಮ ದೇವಸ್ಥಾನ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ಬಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಅಕ್ಷರಗಳ ಕಲಿಕೆ, ಬಣ್ಣ ಹಾಗೂ ವಸ್ತುಗಳ ಗುರುತಿಸುವಿಕೆ, ದವಸ-ಧಾನ್ಯಗಳ ಪರಿಚಯ ಮಾಡಲಾಗುತ್ತದೆ. ಮಕ್ಕಳ ಭೌತಿಕ ಹಾಗೂ ಸಾಮಾಜಿಕ ಚಟುವಟಿಕೆಗೆ ಪಾಲಕರ ಮುಂದೆ ಮುಕ್ತ ವೇದಿಕೆ ದೊರೆಯುತ್ತದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮೊಟ್ಟೆ, ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಕಲಿಸುವ ಚಟುವಟಿಕೆಯನ್ನು ಸಾರ್ವಜನಿಕವಾಗಿ ಪರಿಚಯಿಸುವುದೇ ಬಾಲ ಮೇಳದ ಪರಿಕಲ್ಪನೆ. ಇಂಥ ಕಾರ್ಯಗಳ ಆಯೋಜನೆಯಿಂದ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಅನೇಕರ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಉದ್ಘಾಟಿಸಿದರು. ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯರಾದ ಲಕ್ಷ್ಮೀದೇವಿ, ಸುಪ್ರಿಯಾ ಅರಳಿ, ರಾಜಶೇಖರ ಸಿರಿಗೇರಿ, ಅಜೀಂ ಪ್ರೇನ್‌ಜಿ ಫೌಂಡೇಷನ್‌ನ ಸದಸ್ಯರಾದ ಹಮೀದ್ ಮಂಜೇಶ್ವರ, ಉಮೇಶ್ ಗೌಡ, ಜಿಲ್ಲಾ ಸಂಯೋಜಕ ಚಿಕ್ಕವೀರೇಶ್, ಸಿಆರ್‌ಪಿ ತಿಮ್ಮಣ್ಣ ನಾಯಕ, ಭೀಮಣ್ಣ ಕರಡಿ, ಮುಖ್ಯಶಿಕ್ಷಕರಾದ ಬಸ್ಸಯ್ಯ ಹಿರೇಮಠ, ಶ್ಯಾಮಸುಂದರ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಸಾವಿತ್ರಿ, ಅಂಗನವಾಡಿ ಹಿರಿಯ ಮೇಲ್ವಿಚಾರಕರಾದ ನಾಗಮ್ಮ, ಸುಕನ್ಯಾ, ಲಕ್ಷ್ಮೀದೇವಿ ಸಜ್ಜನ್ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.