ಸಾರಾಂಶ
ಹಳಿಯಾಳ: ಜನರ ರೈತರ ಕಷ್ಟ- ಸುಖಗಳಿಗೆ ಸ್ಪಂದಿಸುವ ಕ್ಷೇತ್ರ ಸಹಕಾರಿಯಾಗಿದ್ದು, ಸಹಕಾರಿ ಸಂಘಗಳು ಭಾವನ್ಮಾತಕವಾದ ಸಂಬಂಧವನ್ನು ಸಮಾಜದಲ್ಲಿ ಬೆಳೆಸುತ್ತವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಸಹಕಾರಿ ಸಂಘಗಳಿಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದ ಪರ್ಯಾಯವಾಗಿ ನಡೆಯುವಂಥ ಆರ್ಥಿಕ ಚಟುವಟಿಕೆಗಳು ಸೌಲಭ್ಯಗಳು ಕೇವಲ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದರು.ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಎಸ್.ಎಲ್. ಘೋಟ್ನೇಕರ ಅವರ ಜೋಡಿ ತೋರಿಸಿದ್ದು, ಈ ಒಗ್ಗಟ್ಟು ಮುಂಬರಲಿರುವ ಎಲ್ಲ ಚುನಾವಣೆಗಳಲ್ಲೂ ಮುಂದುವರಿಯಲಿ. ತಾಲೂಕಿನ ಸಹಕಾರಿ ಸಂಘದಲ್ಲಿ ಬಿಜೆಪಿ ದೊರೆತ ಜಯ ನೋಡಿದರೆ ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿ ಉತ್ತರಕನ್ನಡ ಅತ್ಯುತ್ತಮ ಸಾಧನೆ ಮಾಡಿದ್ದು, ಇಂದು ಬೈರುಂಬೆಯ ಸಹಕಾರಿ ಸಂಘದವರು ಅಳವಡಿಸಿದ ಸಾಫ್ಟವೇರ್‌ಗಳನ್ನು ಕೇಂದ್ರ ಸರ್ಕಾರವು ದೇಶದೆಲ್ಲೆಡೆ ಅಳವಡಿಸಲು ಮುಂದಾಗಿದೆ ಎಂದರು. ಅದಕ್ಕಾಗಿ ಸಹಕಾರಿ ಕ್ಷೇತ್ರಕ್ಕೆ ಆಯ್ಕೆಯಾದವರು ತಮ್ಮ ಸಂಘಗಳನ್ನು ಮಾದರಿ ಕ್ಷೇತ್ರವನ್ನಾಗಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿ ಎಂದರು.ಒಂಬತ್ತು ಬಾರಿ ಗೆದ್ದಿರುವ ರಾಜ್ಯದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ರಾಜ್ಯ ಸರ್ಕಾರದಲ್ಲಿ ತೀರಾ ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದ ಕಾಗೇರಿ, ರಾಜ್ಯಸರ್ಕಾರವು ತಲೆ ತಗ್ಗಿಸುವಂಥ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಎಲ್ಲೂ ನಡೆಯುತ್ತಿಲ್ಲ, ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯೆದ್ದಿದೆ. ಕೇವಲ ಅಲ್ಪಸಂಖ್ಯಾತರ ಒಲೈಕೆಯಲ್ಲಿ ಸರ್ಕಾರ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು. ಕೆಡಿಸಿಸಿ ಚೇರ್‌ಮನ್ ಹುದ್ದೆ: ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಕೆಡಿಸಿಸಿ ಬ್ಯಾಂಕಿಗೆ ಹಳಿಯಾಳ ತಾಲೂಕಿನಿಂದ ಘೋಟ್ನೇಕರ ಅವರನ್ನು ಆಯ್ಕೆ ಮಾಡಿ ಕಳಿಸುತ್ತಿದ್ದು, ಸಹಕಾರಿ ಕ್ಷೇತ್ರದಲ್ಲಿ ಅನುಭವಿಗಳಾಗಿರುವ ಘೋಟ್ನೇಕರ ಅವರನ್ನು ಕೆಡಿಸಿಸಿ ಬ್ಯಾಂಕ್ ಚೇರಮನ್ ಮಾಡಲು ಸಂಸದ ಕಾಗೇರಿಯವರು ಜವಾಬ್ದಾರಿಯನ್ನು ವಹಿಸಬೇಕು ಎಂದು ಮನವಿ ಮಾಡಿದರು.
ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಹಳಿಯಾಳ, ಮುಂಡಗೋಡ ತಾಲೂಕಿನವರೆಗೆ ಯಾವುದೇ ಆದ್ಯತೆ ಕೊಡದ ಕಾಲವೊಂದಿತ್ತು. ವಿ.ಡಿ. ಹೆಗಡೆ ಹಾಗೂ ಘೋಟ್ನೇಕರ ಅವರು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಹಳಿಯಾಳದ ಘನತೆಯನ್ನು ಹೆಚ್ಚಿಸಿದರು ಎಂದರು. ವಿ.ಡಿ. ಹೆಗಡೆ ನನ್ನ ಗುರು: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ನನ್ನ ಗುರುವಾದ ವಿ.ಡಿ. ಹೆಗಡೆಯವರಿಂದ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿರಿಸಿದೆ ಎಂದು ನೆನಪಿಸಿಕೊಂಡ ಅವರು, ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಲಭಿಸಿದ ಗೆಲುವು ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.ಆಯ್ಕೆಯಾದ ನೂತನ ಸದಸ್ಯರು ರೈತರ ಪರವಾಗಿ ಕೆಲಸವನ್ನು ಮಾಡಬೇಕು. ನಷ್ಟದಲ್ಲಿರುವ ಸಹಕಾರಿ ಸಂಘಗಳನ್ನು ಮೇಲಕೆತ್ತಲು ಯೋಜನೆಗಳನ್ನು ರೂಪಿಸಿ ಎಂದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ ವಹಿಸಿದ್ದರು. ಬಿಜೆಪಿ ಪ್ರಮಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳೆ, ವಿ.ಎಂ. ಪಾಟೀಲ, ಗಣಪತಿ ಕರಂಜೇಕರ, ಉದಯ ಹೂಲಿ, ಗುಲಾಬಷ್ಯಾ ಲತೀಪಣ್ಣನವರ ಇತರರು ಇದ್ದರು.