ಹೆಣ್ಣು ಮಕ್ಕಳ ಮೌಢ್ಯದಿಂದ ಹೊರಬನ್ನಿ: ಪಾರ್ವತಿ

| Published : Jan 04 2025, 12:31 AM IST

ಸಾರಾಂಶ

ಬೇವಿನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಯ ಬಾಯಿ ಫುಲೆಯವರ ಜನ್ಮದಿನದ ನಿಮಿತ್ತ ಚಿತ್ರಕಲಾಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರಟಗಿ: ಹೆಣ್ಣು ಮಕ್ಕಳು ಮೌಢ್ಯದಿಂದ ಹೊರಬಂದು ಉನ್ನತ ಶಿಕ್ಷಣ ಪಡೆಯುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯದ ಮೇಲ್ವಿಚಾರಕಿ ಪಾರ್ವತಿ ಹೇಳಿದರು.

ತಾಲೂಕಿನ ಬೇವಿನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಯ ಬಾಯಿ ಫುಲೆಯವರ ಜನ್ಮದಿನದ ನಿಮಿತ್ತ ಅವರ ಬದುಕಿನ ವಿವಿಧ ಮಜಲುಗಳನ್ನು ಬಿಂಬಿಸುವ ಚಿತ್ರಕಲಾಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬಡವರ ಬದುಕಿಗೆ ಆಧಾರ ಶಿಕ್ಷಣ, ಅದು ಹೆತ್ತ ತಾಯಿಯಂತೆ ನಮ್ಮನ್ನು ಬೆಳಸುತ್ತದೆ ಎಂದರು.

ಸಾವಿತ್ರಿಬಾಯಿ ಫುಲೆ ದಂಪತಿ ಕೇಶ ಮುಂಡನೆ, ಬಾಲ್ಯವಿವಾಹ, ಅಸ್ಪೃಶ್ಯತೆ, ದೇಶದ ಅನಿಷ್ಟ ಪದ್ಧತಿಗಳ ವಿರುದ್ಧವಾಗಿ ಎರಡು ನೂರು ವರ್ಷಗಳ ಹಿಂದೇ ಹೋರಾಡಿ ಅಜರಾಮರವಾಗಿದ್ದಾರೆ ಎಂದರು.

ಶಾಲೆಯ ಮುಖ್ಯ ಗುರು ಹಾಗೂ ಲೇಖಕ ಕಳಕೇಶ ಗುಡ್ಲಾನೂರ ಮಾತನಾಡಿ, ಅಕ್ಷರವೇ ನಮ್ಮ ಪ್ರಗತಿಯ ಅಸ್ತ್ರವಾಗಬೇಕಿದೆ. ಫುಲೆದಂಪತಿಗಳ ಹೊಟ್ಟೆಯಲ್ಲಿ ಮಕ್ಕಳು ಹುಟ್ಟಲಿಲ್ಲ. ಆದರೂ ಸಾವಿತ್ರಿಬಾಯಿ ದೇಶಕ್ಕೆ ಅಕ್ಷರದವ್ವ ಎನಿಸಿದರು. ಅವರ ಜನ್ಮದಿನವನ್ನು ಶಿಕ್ಷಣ ಹಾಗೂ ಅರಿವಿನ ದಿನವೆಂದು ಆಚರಿಸಬೇಕಿದೆ ಎಂದರು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದ ದುಕೃತ್ಯಗಳನ್ನು ಪ್ರಶ್ನಿಸುವ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು, ಎಂದರು. ಸಾವಿತ್ರಿಬಾಯಿ ಫುಲೆ ಅವರ ಜೀವ ಬದುಕಿನ ಹಾಡುಗಳನ್ನು, ಚಲನಚಿತ್ರಗಳನ್ನು, ತೋರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್. ಮುಖ್ಯಗುರು ಕಳಕೇಶ ಡಿ. ಗುಡ್ಲಾನೂರ, ಹಳೆಯ ವಿದ್ಯಾರ್ಥಿ ಕೂಟದ ಸುರೇಶ ನಾಗರತ್ನಾ, ಸುನೀತಾ, ರೇಣುಕಾ ಎಸ್‌ಡಿಎಂಸಿ ಪದಾಧಿಕಾರಿಗಳು ಹಳೆಯ ವಿದ್ಯಾರ್ಥಿ ಕೂಟದ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀದೇವಿ ನಿರೂಪಿಸಿದರು.