ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಂದು ಕೊಡುಗೆ ಕೊಟ್ಟು ಹೋಗಬೇಕು. ಆ ಕೊಡುಗೆ ನಾವು ಇರದಿದ್ದರೂ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಂದು ಕೊಡುಗೆ ಕೊಟ್ಟು ಹೋಗಬೇಕು. ಆ ಕೊಡುಗೆ ನಾವು ಇರದಿದ್ದರೂ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿಜಯಪುರ ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿರುವ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ ಈ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿ.ಜಿ.ಎಸ್.ಕಶೆಟ್ಟಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಸಹಕಾರಿ ರಂಗವು ನಮ್ಮ ದೇಶದ ಆರ್ಥಿಕತೆಯ ಭದ್ರ ಬುನಾದಿಯಾಗಿದೆ. ಅಂತಹ ಸಹಕಾರಿ ಕ್ಷೇತ್ರ ತಾಳಿಕೋಟೆಯಲ್ಲಿ ಹಿರಿಮೆಯಾಗಿ ಬೆಳೆಯುತ್ತಿರುವದು ಬಹುದೊಡ್ಡ ಬೆಳವಣಿಗೆ ಎಂದರು. ರೈತರ ಅನುಕೂಲಕ್ಕಾಗಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದ ಧಾರವಾಡದ ಸಿದ್ದನಗೌಡರನ್ನು ನೆನೆಯಬೇಕಾಗುತ್ತದೆ. ದೇಶದಲ್ಲೇ ಶೂನ್ಯ ಬಡಿದ್ದರದಲ್ಲಿ ರಾಜ್ಯದ ೫೩ ಲಕ್ಷ ರೈತರಿಗೆ ಸಾಲಸಿಗುತ್ತಿದೆ. ಇದು ಬೇರ್ಯಾವ ರಾಜ್ಯದಲ್ಲಿಯೂ ಇಲ್ಲ ಕರ್ನಾಟಕದಲ್ಲಿ ಮಾತ್ರವಿದೆ ಎಂದು ಹೇಳಿದರು.

ನಮ್ಮ ವಿಜಯಪುರ ಜಿಲ್ಲೆಯಲ್ಲಿ ಮೊದಲು ಕುಡಿಯಲಿಕ್ಕೆ ನೀರು ಸಿಗುತ್ತಿರುಲಿಲ್ಲ, ಈಗ ರಾಜ್ಯದ ೩ನೇ ಸ್ಥಾನದಲ್ಲಿ ಹಾಲು ಉತ್ಪಾದನೆಯಲ್ಲಿ ಗುರುತಿಸಿಕೊಂಡಿದೆ. ಮಂಡ್ಯದಲ್ಲಿ ಉತ್ಪಾದಿಸುವ ಸಕ್ಕರೆಯನ್ನು ನಮ್ಮ ನಿರಾಣಿ ಸಕ್ಕರೆ ಕಾರ್ಖಾನೆಯೊಂದೆ ಉತ್ಪಾದಿಸುತ್ತಿದೆ. ಅಷ್ಟೊಂದು ಬದಲಾವಣೆ ನಾವು ಕಂಡಿದ್ದೇವೆಂದರು. ಹೊಸ ಕಟ್ಟಡದೊಂದಿಗೆ ಹೊಸ ಹೆಜ್ಜೆ ಇಡುತ್ತಿರುವ ಶ್ರೀ ಬಸವೇಶ್ವರ ಬ್ಯಾಂಕ್‌ ಶತಮಾನದ ಸಂಭ್ರಮ ಕಾಣಲಿ ಎಂದು ಹಾರೈಸಿದರು.

ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾತನಾಡಿ, ಬ್ಯಾಂಕ್‌ಗಳು ಬೆಳೆಯಬೇಕಾದರೆ ಉದ್ಯಮಶೀಲತೆ ಗುರುತಿಸಿ ಸಾಲ ನೀಡಬೇಕಾಗುತ್ತದೆ. ಸಂಬಂಧಿಕರ ಮಾತಿಗೆ ಮಣೆಹಾಕಿ ಸಾಲ ನೀಡದೇ ಹಣಕಾಸಿನ ವ್ಯವಹಾರ ಮಾಡಬೇಕು. ಇಂತಹ ನಿಲುವು ಬಸವೇಶ್ವರ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿ.ಜಿ.ಎಸ್.ಕಶೆಟ್ಟಿ ಹೊಂದಿದ್ದರಿಂದ ಕೇವಲ ೧೮ ವರ್ಷಗಳಲ್ಲಿ ದೊಡ್ಡಮಟ್ಟದ ಸಹಕಾರಿ ಬ್ಯಾಂಕ್‌ ಆಗಿ ಬೆಳೆದು ನಿಂತಿದೆ. ಆಡಳಿತ ಮಂಡಳಿ, ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡಿದಾಗ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವೆಂದರು.

ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ನಾವು ಮಾಡುವ ಕೆಲಸಗಳನ್ನು ಸಮಾಜ ನೋಡುತ್ತಿರುತ್ತದೆ. ನಮ್ಮ ಒಳ್ಳೆಯ ಕಾರ್ಯಗಳು ನಾವು ಇಲ್ಲದಿದ್ದರೂ ಅವು ಗುರುತಿಸುತ್ತವೆ. ಅಂತಹ ಒಳ್ಳೆಯ ಕೆಲಸ ಮಾಡಿದ ಜಿ.ಎಸ್.ಕಶೆಟ್ಟಿ ಕಾರ್ಯದಿಂದ ಬ್ಯಾಂಕ್‌ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿದೆ ಎಂದರು. ಸಚಿವ ಶಿವಾನಂದ ಪಾಟೀಲರದ್ದೂ ಕೂಡಾ ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಇದೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ ಇಂಗಳೇಶ್ವರ ಶ್ರೀ ಜಗದ್ಗುರು ಡಾ.ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಂಗಳೇಶ್ವರ ಶ್ರೀ ಚನ್ನಬಸವ ಮಹಾಸ್ವಾಮೀಜಿ ಪಾದವಿಟ್ಟ ನೆಲ ಪಾವನ ಕ್ಷೇತ್ರವಾಗಿದೆ. ತಾಳಿಕೋಟೆಯ ಶ್ರೀ ಬಸವೇಶ್ವರ ಬ್ಯಾಂಕ್‌ ಹೆಮ್ಮರವಾಗಿ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.

ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು, ಡಿಸಿಸಿ ಬ್ಯಾಂಕ್‌ ಮತ್ತು ಬಸವೇಶ್ವರ ಸಹಕಾರಿ ಸಂಘದ ನಿರ್ದೇಶಕ ಬಿ.ಎಸ್.ಪಾಟೀಲ (ಯಾಳಗಿ), ಕರ್ನಾಟಕ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜೇಗೌಡ ಮಾತನಾಡಿದರು.

ಬಸವೇಶ್ವರ ಸಂಘದ ಅಧ್ಯಕ್ಷ ಕಾಶಿನಾಥ ಮುರಾಳ ಅಧ್ಯಕ್ಷತೆ ವಹಿಸಿದ್ದರು. ವೀ.ವಿ ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಸಜ್ಜನ, ಉಪಾಧ್ಯಕ್ಷ ಈರಣ್ಣ ಸಜ್ಜನ, ನಿರ್ದೇಶಕರಾದ ಎಂ.ಎಸ್.ಸರಶೆಟ್ಟಿ, ಬಾಪುಗೌಡ ಪಾಟೀಲ, ಅಶೋಕ ಜಾಲವಾದಿ, ಚನ್ನಬಸಪ್ಪ ರೂಡಗಿ, ಸುಭಾಸ ಹೂಗಾರ, ಪ್ರಕಾಶ ಕಶೆಟ್ಟಿ, ಮುರಿಗೆಮ್ಮ ಯರನಾಳ, ಶಿಲ್ಪಾ ಕಿಣಗಿ, ಶ್ರೀದೇವಿ ನಾಯ್ಕೋಡಿ, ಕಾರ್ಯನಿರ್ವಾಹಕ ಮುತ್ತುಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಗುರು ತಾರನಾಳ, ಸಹಕಾರಿ ಸಂಘಗಳ ಉಪನಿಬಂದಕ ಚೇತನ ಭಾವಿಕಟ್ಟಿ, ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ ಮೊದಲಾದವರಿದ್ದರು.

ಶ್ರೀ ಖಾಸ್ಗತೇಶ್ವರ ಮಠದ ಉಳಿದ ಕಟ್ಟಡದ ಕೆಲಸ ನಡೆದಿದೆ. ಸುಮಾರು ೨೫೦೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ದಿನದ ೨೪ ಗಂಟೆ ಉಚಿತ ಪ್ರಸಾದ ನಿಲಯ ಪ್ರಾರಂಭಗೊಳ್ಳಲಿದೆ. ಶ್ರೀ ಖಾಸ್ಗತರ ಕನಸಿನ ಕೂಸು ಸಂಗೀತ ಶಾಲೆ ೫೦೦ ವಿದ್ಯಾರ್ಥಿಗಳೊಂದಿಗೆ ಮುನ್ನಡೆಯಲಿದೆ. ಯುವಕರಿಗೆ ದುಶ್ಚಟ ಬಿಡಿಸಲು ಜೋಳಿಗೆ ಕಟ್ಟಿಕೊಂಡು ಹಳ್ಳಿ ಹಳ್ಳಿಗೆ ಪಾದಯಾತ್ರೆ ನಡೆಸಿದ್ದೇನೆ. ಯುವಕರು ದೇಶಕ್ಕೆ ಕೊಡುಗೆ ನೀಡುವಂತವರಾಗಬೇಕು.

ಬಾಲಶಿವಯೋಗಿ ಸಿದ್ದಲಿಂಗ ದೇವರು, ಖಾಸ್ಗತೇಶ್ವರ ಮಠ

ಪಾಂಡುರಂಗ ದೇಸಾಯಿ ಲಕ್ಷ್ಮೀಗುಡಿ ಮಾಲೀಕರು ಪ್ರಾರಂಭಿಸಿದ ಡಿಸಿಸಿ ಬ್ಯಾಂಕ್‌ ಸದ್ಯ ₹೧೪ ಸಾವಿರ ಕೋಟಿ ವ್ಯವಹಾರದೊಂದಿಗೆ ಮುನ್ನಡೆದಿದೆ. ವಿಜಯಪುರ ಸಿದ್ದೇಶ್ವರ ಬ್ಯಾಂಕ್‌ ಹೆಮ್ಮರವಾಗಿ ಬೆಳೆದಿದೆ. ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರ ಅಷ್ಟೇ ಅಲ್ಲದೇ ವಿದ್ಯಾದಾನಕ್ಕೆ ಮೊದಲನೇಯದಾಗಿದೆ. ಬಂಥನಾಳ ಶಿವಯೋಗಿಗಳು ಬಿಎಲ್‌ಡಿ ಶಿಕ್ಷಣ ಸಂಸ್ಥೆ ಕಟ್ಟದಿದ್ದರೆ ಇಡೀ ಜಿಲ್ಲೆಯ ಜನರು ಅಜ್ಞಾನದ ಕತ್ತಲೆಯಲ್ಲಿ ಇರಬೇಕಾಗುತ್ತಿತ್ತು.

ಶಿವಾನಂದ ಪಾಟೀಲ, ಸಚಿವರು

ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಆರ್ಥಿಕವಾಗಿ ಸಮಾನವಾಗಿ ಬೆಳೆಸಿಕೊಂಡು ಹೋಗುವಂತಹ ಗುಣ ಸಹಕಾರಿ ಸಂಘಗಳಿಗಿವೆ. ಅಂತಹ ನಿಲುವಿನಿಂದಲೇ ಬಸವೇಶ್ವರ ಬ್ಯಾಂಕ್‌ ಅಲ್ಪ ಅವಧಿಯಲ್ಲಿಯೇ ಸ್ವಂತ ಕಟ್ಟಡದೊಂದಿಗೆ ನೂರು ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಾ ಮುನ್ನಡೆಯಲು ಸಾಧ್ಯವಾಗಿದೆ.

ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕರು