ಸಾರಾಂಶ
ಕಾರಟಗಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ
ಕನ್ನಡಪ್ರಭ ವಾರ್ತೆ ಕಾರಟಗಿಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಯಲ್ಲಿ ಪತ್ತಿನ ಸಹಕಾರಿ ಸಂಘಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಸಿಬ್ಬಂದಿ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಹಕಾರಿ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ, ಸೌಹಾರ್ದ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕಾರಟಗಿ ಮತ್ತು ಕಾರಟಗಿ ತಾಲೂಕಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕಗಳು ಕೃಷಿ ಮತ್ತು ಕೃಷಿಕರಿಗೆ ಹಾಗೂ ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ನೀಡಿದ ಕೊಡುಗೆಗಿಂತಲೂ ಸಹಕಾರಿ ಸಂಘಗಳು ನೀಡಿದ ಕೊಡುಗೆ ಅಪಾರ. ಸದಸ್ಯರಿಗೆ ಸಕಾಲದಲ್ಲಿ ಆರ್ಥಿಕ ನೆರವು ನೀಡಿ ಬಡವರ ಅಭ್ಯುದಯಕ್ಕೆ ಕಾರಣವಾಗಿವೆ. ಪತ್ತಿನ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ ಜನರ ಬದುಕಿಗೆ ಆಸರೆಯಾಗುವ ಮುಖಾಂತರ ಗತವೈಭವಕ್ಕೆ ಮರಳಬೇಕು ಎಂದರು.
ಆರ್‌ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ತೋರಣದಿನ್ನಿ ಮಾತನಾಡಿ, ಸಂಘದ ವ್ಯವಹಾರದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ತರಬೇತಿ ಶಿಬಿರ ಪ್ರಯೋಜನಕಾರಿ ಎಂದರು.ಮರುಳಸಿದ್ದಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಸಹಕಾರಿ ರಂಗದ ಮಹತ್ವದ ಕುರಿತು ಹೊಸಪೇಟೆ ವಿಕಾಸ ಸಹಕಾರಿ ಸೌಹಾರ್ದ ನಿಯಮಿತದ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.
ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣೇಗೌಡ ಕೊಂತನೂರು ಪೊಲೀಸ್‌ಪಾಟೀಲ್, ಸಹಕಾರಿ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೋಡ, ಕೊಪ್ಪಳದ ಸಹಕಾರ ಸಂಘಗಳ ಉಪನಿಬಂಧಕ ದಸ್ತಗೀರ ಅಲಿ, ಶಿವರೆಡ್ಡಿ ನಾಯಕ, ಉದ್ಯಮಿ ಕೆ. ನಾಗಪ್ಪ ಎಲ್. ವಿ.ಟಿ. ವಿಜಯಲಕ್ಷ್ಮೀ ಮೇಲಿನಮನಿ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅಕ್ಷಯ್ ಕುಮಾರ, ನಿರ್ದೇಶಕ ರಾಜಶೇಖರ ಎಂ. ಹೊಸಮನಿ ಇನ್ನಿತರರು ಇದ್ದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಸಹಕಾರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಹಕಾರಿ ರಂಗದ ಧುರೀಣರು, ವಿವಿಧ ಸಹಕಾರಿ ಸಂಘಗಳ ಪ್ರತಿನಿಧಿಗಳು, ನೌಕರರು, ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿ ಮೆರವಣಿಗೆಗೆ ಕಳೆ ತಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ, ಸೌಹಾರ್ದ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಅಮರಯ್ಯಸ್ವಾಮಿ ಸಾಲಿಮಠ ಸಹಕಾರ ಧ್ವಜಾರೋಹಣ ನೆರವೇರಿಸಿದರು.