ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದು

| Published : Jul 03 2024, 12:19 AM IST

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಹೊರವಲಯದ ಯಡಪುರ ಗ್ರಾಮದ ಸಮೀಪದಲ್ಲಿ ಇರುವ ಚಾಮರಾಜನಗರದ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೈದ್ಯರು ದೇವರ ಸಮಾನ ಎಂದರ್ಥ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ನಮ್ಮನ್ನು ಗುಣಪಡಿಸಿ ನಮಗೆ ಮರುಜೀವ ನೀಡುವ ವೈದ್ಯರು ನಿಜಕ್ಕೂ ದೇವರ ಸಮಾನ. ನಮ್ಮ ಪಾಲಿಗೆ ದೇವರೇ ಆಗಿರುವ ವೈದ್ಯರನ್ನು ಗೌರವಿಸುವ ದಿನ ರಾಷ್ಟ್ರೀಯ ವೈದ್ಯರ ದಿನ ಎಂದು ಡೀನ್ ಮತ್ತು ನಿರ್ದೇಶಕರಾದ ಡಾ.ಎಚ್.ಜಿ.ಮಂಜುನಾಥ್ ತಿಳಿಸಿದರು.

ನಗರದ ಹೊರವಲಯದ ಯಡಪುರ ಗ್ರಾಮದ ಸಮೀಪದಲ್ಲಿ ಇರುವ ಚಾಮರಾಜನಗರದ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ನ್ಯಾಷನಲ್ ವೈದ್ಯರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಆಶಾಕಿರಣ ಡಾ. ಬಿಧನ್ ಚಂದ್ರ ರಾಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಕೇಕ್ ಕತ್ತರಿಸುವ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೈದ್ಯರು ಹಲವು ಬಾರಿ ರೋಗಿಗಳ ಪಾಲಿಗೆ ದೇವರ ರೂಪದಲ್ಲೇ ಕಾಣಿಸುತ್ತಾರೆ. ಅದೇ ಜನರಿಗೆ ವೈದ್ಯರು ದೇವರೇ ಆಗಿರುವುದು ಅತಿಶಯೋಕ್ತಿಯಲ್ಲ. ಇವರು ಎಲ್ಲಾ ರೀತಿಯ ಕಾಯಿಲೆಗಳು, ರೋಗಗಳ ವಿರುದ್ಧ ಕೋಟೆ ಕಟ್ಟಿ, ಜನರು ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡುತ್ತಾರೆ. ನಾವು ಉತ್ತಮ ಜೀವನ ನಡೆಸುವಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಅವರು ರೋಗಿಗಳಿಗೆ ಒಲವು ತೋರುತ್ತಾರೆ, ಭರವಸೆ ನೀಡುತ್ತಾರೆ, ಅಗತ್ಯ ಔಷಧಿಗಳನ್ನು ಒದಗಿಸುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ರೋಗಿಯು ಗುಣಮುಖನಾಗುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಜನರ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಅವರು ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.ವೈದ್ಯಕೀಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಮಾರುತಿ ಮಾತನಾಡಿ, ಸಮಾಜಕ್ಕೆ ವೈದ್ಯಕೀಯ ವೃತ್ತಿಪರರ ಕೊಡುಗೆಗಳನ್ನು ಗುರುತಿಸಲು ಮತ್ತು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ದಿನವು ಒಂದು ಅವಕಾಶವಾಗಿದೆ ಎಂದರು. ಸಮಾಜಕ್ಕೆ ಅವರ ನಿಸ್ವಾರ್ಥ ಸೇವೆಯನ್ನು ಪ್ರತಿದಿನ ಆಚರಿಸಬೇಕು ಮತ್ತು ಗೌರವಿಸಬೇಕು. ಹೀಗೆ ವೈದ್ಯರಿಗೆ ಗೌರವ ಸಲ್ಲಿಸಿ, ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.ಕಾಲೇಜು ಪ್ರಾಂಶುಪಾಲರಾದ ಗಿರೀಶ್ ಪಾಟೀಲ್‌ ಮಾತನಾಡಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವ ಚಿಕಿತ್ಸೆಗಳು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ವೈದ್ಯರ ಶ್ರಮ ಅನನ್ಯವಾಗಿದೆ ಎಂದರು.ಡಾ.ರಮೇಶ್, ಮಾತನಾಡಿ ಶಸ್ತ್ರ ಚಿಕಿತ್ಸ ಘಟಕವು ಉತ್ತಮ ಸೇವೆಗಳನ್ನು ನೀಡುತ್ತಿದೆ. ಶಸ್ತ್ರ ಚಿಕಿತ್ಸ ವೈದ್ಯರ ಶ್ರಮ ಮೆಚ್ಚುವಂತದ್ದು ಇಲ್ಲಿಯವರೆಗೂ ಹಲವಾರು ರೀತಿಯ ಶಸ್ತ್ರ ಚಿಕಿತ್ಸೆಗಳು ನಡೆದಿದೆ. ವೈದ್ಯಕೀಯ ಕಾಲೇಜಿನ ಶಿಕ್ಷಕರುಗಳು ಬೋಧನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬೋಧನೆಯ ಮೂಲಕ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ. ಜಿಲ್ಲೆಯ ವೈದ್ಯರುಗಳು ಜಿಲ್ಲೆಗಳಿಂದ ಬರುತ್ತಿರುವ ರೋಗಿಗಳಿಗೆ ಒಳ್ಳೆಯ ಮನಸ್ಸಿನಿಂದ ಚಿಕಿತ್ಸೆಗಳನ್ನು ನೀಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು. ಡಾ.ದೇವಕಿ ಮಾತನಾಡಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಬೋಧನಾಕ್ಷೇತ್ರದಲ್ಲಿ ಉತ್ತಮ ಸಾದನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿಷಯಗಳನ್ನು ತಿಳಿಸಿಕೊಡುವುದರ ಜೊತೆಗೆ ಸ್ನೇಹ ಭಾಂದವ್ಯಗಳನ್ನು ಬೆಳೆಸಿಕೊಂಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ನಂಜುಂಡೇಗೌಡ, ಡಾ. ಅಜಯ್ ಹಾಗೂ ೧೦೦ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗಳು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಮತ್ತು ಬೋಧಕರ ಸಂಘದ ಪದಾಧಿಕಾರಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಮತ್ತು ಇನ್ನು ಮುಂತಾದವರು ಭಾಗವಹಿಸಿದ್ದರು.