ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯ, ಭಾಷೆ , ನಾಡು, ಸಂಸ್ಕೃತಿ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯ, ಭಾಷೆ , ನಾಡು, ಸಂಸ್ಕೃತಿ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕಸಾಪ, ವಿರಾಜಪೇಟೆ ತಾಲೂಕು ಕಸಾಪ, ಕಾವೇರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲಘಟ್ಟದ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಯುವಜನರನ್ನು ತೆಗೆದುಕೊಂಡರೆ ಪುಸ್ತಕಗಳನ್ನು, ವೃತ್ತ ಪತ್ರಿಕೆಗಳನ್ನು ಓದುವ ಹವ್ಯಾಸ ತೀರಾ ಕಡಿಮೆ. ಇದರಿಂದಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವಾಗ, ಬರೆಯುವಾಗ ಆದೆಷ್ಟೋ ಹಳೆಯ ಪದಗಳ ಅರ್ಥವಾಗಲಿ, ಪದಗಳನ್ನು ಎಲ್ಲಿ, ಹೇಗೆ ಬಳಸಬೇಕೆಂದು ತಿಳಿದಿಲ್ಲ. ಇದರ ಜೊತೆಗೆ ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿ ಓದುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿ, ಸಾಹಿತ್ಯ ಪ್ರಕಾರಗಳು ಕನ್ನಡ ಭಾಷೆಗಾಗಿ ಶ್ರಮಿಸಿದಂತಹ ವಿವಿಧ ವ್ಯಕ್ತಿ ವ್ಯಕ್ತಿತ್ವಗಳನ್ನು ಈಗಿನ ತಲೆಮಾರಿಗೆ ಹಾಗೂ ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ದೃಷ್ಟಿಯಿಂದ ಈ ರೀತಿಯ ದತ್ತಿನಿಧಿ ಉಪನ್ಯಾಸಗಳು ಶಾಲಾ ಕಾಲೇಜುಗಳಲ್ಲಿ ಆಯೋಜನೆಯಾಗುತ್ತಿರುವುದು ಶ್ಲಾಘನೀಯ ವಿಚಾರ. ವ್ಯಕ್ತಿ ಮರಣ ಹೊಂದಿದರೂ ಆತನ ಹೆಸರಿನಲ್ಲಿ ದತ್ತಿನಿಧಿ ಇಡುವುದರ ಮೂಲಕ ವ್ಯಕ್ತಿ ಸತ್ತ ನಂತರವೂ ಆತನಿಂದ ಆತನ ನೆನಪಿನಲ್ಲಿ ಈ ರೀತಿಯ ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯಗಳನ್ನು ನಡೆಸುವುದು ಆ ವ್ಯಕ್ತಿಯನ್ನು ಎಂದೆಂದಿಗೂ ಅಜರಾಮರವಾಗಿಸುತ್ತದೆ. ಆದಷ್ಟು ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಪುಸ್ತಕಗಳನ್ನು ಓದುವುದನ್ನು ರೂಡಿಸಿಕೊಂಡು ಭಾಷೆ, ಭಾಷೆಯ ಸಂಸ್ಕೃತಿ, ಭಾಷೆಯ ವೈಭವವನ್ನು ಅರಿಯುವುದರ ಕಡೆಗೆ ತಮ್ಮ ಒಲವನ್ನು ವ್ಯಕ್ತಪಡಿಸಬೇಕು ಎಂದರು.

ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧಿಕಾರಿಗಳಾದ ಶಬರೀಶ್ ಶೆಟ್ಟಿ ಅವರು ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ದುಡಿದ ಉದ್ಯಮಿ ಒಬ್ಬರ ಕುರಿತಾದ ಉಪನ್ಯಾಸ ಎಂಬ ವಿಷಯ ಕುರಿತು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ದುಡಿದಂತಹ ದಿ. ಎಂ.ಜೆ. ಪದ್ಮನಾಭ ಕಾಮತ್ ಅವರ ಸಾಧನೆ ಮತ್ತು ಕೊಡಗು ಜಿಲ್ಲೆಯಲ್ಲಿ ಅವರು ಮಾಡಿದ ಕನ್ನಡ ಪರ ಹೋರಾಟ, ಕನ್ನಡದ ಅಭಿವೃದ್ಧಿಗೆ ಮಾಡಿದ ಕಾರ್ಯವನ್ನು ವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪರಿಷತ್ ವತಿಯಿಂದ ಇರುವ ಎಲ್ಲ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಶಾಲಾ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಕನ್ನಡ ಭಾಷೆ ಸಾಹಿತ್ಯ ಹಾಗೂ ಇನ್ನಿತರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಪೂರ್ಣ ಅಂಕಗಳನ್ನು ಪಡೆಯಲು ಶೈಕ್ಷಣಿಕ ಪಠ್ಯವನ್ನು ಮಾತ್ರ ಓದುತ್ತಾರೆ. ಮುಂದೆ ಅವರು ಸಾಮಾಜಿಕ ಜೀವನಕ್ಕೆ ಬಂದಂತಹ ಸಂದರ್ಭದಲ್ಲಿ ಅವರ ಸಾಮಾನ್ಯ ಜ್ಞಾನದ ಪ್ರಮಾಣ ತೀರ ಕಡಿಮೆ ಇರುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದ ಹಂತದಲ್ಲಿ ಹೆಚ್ಚು ಹೆಚ್ಚು ಪುಸ್ತಕ ಹಾಗೂ ಪ್ರತಿದಿನ ವೃತ್ತ ಪತ್ರಿಕೆ ಓದುವುದರಿಂದ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಉತ್ತಮ ಜೀವನವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದರೊಂದಿಗೆ ಶೇ/ 90ಕ್ಕಿತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿಕೊಂಡು ಹೆಚ್ಚಿನ ಸಮಯವನ್ನು ಪುಸ್ತಕದೊಂದಿಗೆ ಕಳೆಯುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಕಾರ್ಯಕ್ರಮವನ್ನು ಆಲಿಸುವ ಮೂಲಕ ಒಬ್ಬರಾದರೂ ಮುಂದಿನ ಜೀವನದಲ್ಲಿ ಕವಿ, ಲೇಖಕರಾಗ ಬೇಕು ಎಂದರು.

ವಿರಾಜಪೇಟೆ ತಾಲೂಕು ಸಮಿತಿ ಗೌರವ ಕಾರ್ಯದರ್ಶಿಗಳಾದ ಟೋಮಿ ಥೋಮಸ್ , ಎಚ್.ಜಿ. ಸಾವಿತ್ರಿ, ಮಂಜುನಾಥ್, ದತ್ತಿ ದಾನಿ ಕುಟುಂಬಸ್ಥ ಪ್ರಮೋದ್ ಕಾಮತ್ , ಐಕ್ಯೂಎಸಿ ಸಂಚಾಲಕ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಬಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿಗಳು, ತಾಲೂಕು ಪರಿಷತ್ ಸದಸ್ಯರು, ದತ್ತಿ ದಾನಿ ಕುಟುಂಬಸ್ಥ ವಿದ್ಯಾರ್ಥಿಗಳು ಹಾಜರಿದ್ದರು.