ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಉತ್ತಮ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಮಗಸ್ವಾಮಿ ಜೆ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಸಮಾಜಮುಖಿ ಚಿಂತನೆಗಳಿಗೆ ಪೂರಕ ವಾತವರಣ ನಿರ್ಮಿಸುವ ಮೂಲಕ ಕಾನೂನು ಬದ್ಧ ಕಾರ್ಯಕ್ಕೆ ಅಣಿಯಾಗಿದ್ದಾರೆ ಎಂದರು.
ಕಿರಿಯ ನ್ಯಾಯವಾದಿಗಳು ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ತಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸಿಕೊಳ್ಳಲು ಸಾಧ್ಯ. ಈ ಹಿನ್ನೆಲೆ ಯುವ ವಕೀಲರು ವೃತ್ತಿಯಲ್ಲಿ ಸದಾ ತಾಳ್ಮೆ, ಸಂಯಮವನ್ನು ರೂಡಿಸಿಕೊಂಡು ಕಕ್ಷಿದಾರರರಿಗೆ ನ್ಯಾಯ ದೊರೆಕಿಸಿಕೊಡುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದು ಹೇಳಿದರು.ಗಂಗಾವತಿಯ ಹಿರಿಯ ನ್ಯಾಯವಾದಿ ವಿ.ಎನ್. ಪಾಟೀಲ ಉಪನ್ಯಾಸ ನೀಡಿ, ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರ ಹುಟ್ಟು ಹಬ್ಬವನ್ನು ವಕೀಲರ ದಿನಾಚರಣೆಯನ್ನಾಗಿ ಮಾಡಲಾಗುತ್ತಿದೆ. ಸಾಮಾಜಿಕ ಸಮಾನತೆ, ವ್ಯಕ್ತಿಯ ಘನತೆಯನ್ನು ವಕೀಲರು, ನ್ಯಾಯಾಲಯಗಳು ಎತ್ತಿ ಹಿಡಿದಿವೆ. ಉನ್ನತ ಪರಂಪರೆ ಇರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಬೇಕು. ಜೊತೆಗೆ ಪ್ರಕರಣಗಳಿಗಿಂತ ವಿಷಯಕ್ಕೆ ಮಹತ್ವ ನೀಡಬೇಕು ಎಂದರು.
ಕರ್ನಾಟಕ ಜನಪದ ಅಕಾಡಮಿ ಸದಸ್ಯ ಹಾಗೂ ಹಾಸ್ಯ ಕಲಾವಿದ ಡಾ. ಜೀವನಸಾಬ ಬಿನ್ನಾಳ ಮಾತನಾಡಿ, ಜನಪದ ಗ್ರಾಮೀಣ ಪ್ರದೇಶದ ಜನರಲ್ಲಿ ಮಾತ್ರ ಅಲ್ಪ-ಸ್ವಲ್ಪ ಉಳಿದುಕೊಂಡಿದೆ. ಈ ಜನಪದವನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಾದರೆ ಪ್ರತಿಯೊಬ್ಬರು ಇದನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನ್ಯಾಯಾಂಗ ಇಲಾಖೆ ಯುವ ವಕೀಲರ ಮೇಲೆ ಹೊಸ ಭರವಸೆಗಳನ್ನು ಇಟ್ಟುಕೊಂಡಿದೆ. ವೈದ್ಯರಿಗೆ ಹಾಗೂ ವಕೀಲರಿಗೆ ನಿವೃತ್ತಿ ಎನ್ನುವುದಿಲ್ಲ, ವಕೀಲ ವೃತ್ತಿ ಬಹಳ ಪವಿತ್ರವಾದ ಕ್ಷೇತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಿಸಿಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ ಎಚ್.ಎಚ್. ಹಿರೇಮನಿ, ಕಳಕಪ್ಪ ಬೆಟಗೇರಿ, ಶಶಿಧರ ಶ್ಯಾಗೋಟಿ, ಇಂದಿರಾ ಉಳ್ಳಾಗಡ್ಡಿ ಮತ್ತಿತರರು ಇದ್ದರು. ನ್ಯಾಯವಾದಿ ಎಸ್.ಎನ್. ಶ್ಯಾಗೋಟಿ ಸ್ವಾಗತಿಸಿದರು. ಮಹಾಂತೇಶ ಬೂದಗುಂಪಿ ನಿರೂಪಿಸಿದರು. ಈರಣ್ಣ ಕೋಳೂರ ವಂದಿಸಿದರು.