ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಪ್ರಮುಖ

| Published : Mar 21 2025, 12:32 AM IST

ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಪ್ರಮುಖ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಹಕಾರ, ಸಲಹೆ ನೀಡುವ ಹಾಗೂ ಸಾರ್ವಜನಿಕ ಆಡಳಿತ ಸುಗಮಗೊಳಿಸುವಲ್ಲಿ ವಕೀಲ ಸಮುದಾಯ ಸದಾ ಮುಂದಿರುತ್ತದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಹೇಳಿದರು.

ಶಿವಮೊಗ್ಗ: ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಹಕಾರ, ಸಲಹೆ ನೀಡುವ ಹಾಗೂ ಸಾರ್ವಜನಿಕ ಆಡಳಿತ ಸುಗಮಗೊಳಿಸುವಲ್ಲಿ ವಕೀಲ ಸಮುದಾಯ ಸದಾ ಮುಂದಿರುತ್ತದೆ ಎಂದು ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಕುರಿತು ಏರ್ಪಡಿಸಿದ್ದ ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ರಾಷ್ಟ್ರ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದಾಗಿತ್ತು. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರೆಲ್ಲ ವಕೀಲರಾಗಿದ್ದರು. ಮೇಲ್ಪಂಕ್ತಿಯ ಸಮುದಾಯ ಇದು. ಸರ್ಕಾರದ ಇತರೆ ಅಂಗಗಳಿಗಿಂತ ನ್ಯಾಯಾಂಗದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ, ವಿಶ್ವಾಸ ಇದೆ. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಹೆಚ್ಚಿದೆ. ನಮ್ಮ ದೇಶದಲ್ಲಿ ವಕೀಲರು, ನ್ಯಾಯಾಧೀಶ ಸಂಖ್ಯೆ ಕಡಿಮೆ ಇದೆ. ಆದರೂ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸೇರಿದರೆ ಮಾತ್ರ ಸಾರ್ವಜನಿಕ ಆಡಳಿತ ಸಾಧ್ಯ ಎಂದರು.ಇಡೀ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಯಾವಾಗಲೂ ವಕೀಲರು ಧ್ವನಿ ಎತ್ತುವ ಕೆಲಸ ಮಾಡುತ್ತಾ ಬಂದಿದ್ದಾರೆ. ಕಾರಣ ಅವರು ಕಾನೂನು, ವಿಶ್ಲೇಷಣೆಯಲ್ಲಿ ತರಬೇತಿ ಹೊಂದಿದ ಸಮುದಾಯವಾಗಿರುವುದು. ಈ ಪರಿಣಿತಿ, ಜ್ಞಾನದ ಜೊತೆ ಸಾಮಾಜಿಕ ಪ್ರವೃತ್ತಿಯನ್ನೂ ಬೆಳೆಸಿಕೊಂಡರೆ ಇತರೆ ಅಂಗಗಳಿಗೆ ಒತ್ತಾಸೆಯಾಗಿ ನಿಲ್ಲಬಹುದು. ಸಹಕರಿಸುವ, ಲೋಪಗಳನ್ನು ಸರಿಪಡಿಸುವ ಅವಕಾಶ ಈ ಸಮುದಾಯಕ್ಕಿದೆ. ವಕೀಲರು ಮನಸ್ಸು ಮಾಡಿದರೆ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದರು.ಶಾಸಕಾಂಗ ಕಾನೂನು ರಚಿಸಿದರೆ, ಕಾರ್ಯಾಂಗ ಕಾನೂನು, ಸರ್ಕಾರ ರೂಪಿಸುವ ಯೋಜನೆಗಳು, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ. ಆದರೆ ನ್ಯಾಯಾಂಗಕ್ಕೆ ಈ ಎಲ್ಲವನ್ನೂ ವಿಶ್ಲೇಷಣೆ ಮಾಡುವ ಶಕ್ತಿ ಇದೆ. ಯಾವ ಹೊಸ ಕಾನೂನು ಬೇಕು, ಯಾವುದು ಬೇಡ ಎಂಬ ಸಲಹೆಗಳನ್ನು ನೀಡುವ ಶಕ್ತಿ ವಕೀಲ ಸಮುದಾಯಕ್ಕಿದೆ. ವ್ಯಾಖ್ಯಾನ, ವಿಶ್ಲೇಷಣೆ ಮತ್ತು ಉತ್ತಮ ತೀರ್ಪುಗಳಿಗೆ ಮುಖ್ಯ ಕಾರಣಕರ್ತರು ವಕೀಲರು ಎಂದು ಬಣ್ಣಿಸಿದರು.ಸರ್ಕಾರದ ನಿಯಮಾವಳಿಗಳು, ನಿರ್ದೇಶನ, ಒಟ್ಟಾರೆ ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿರುವುದು ವಕೀಲ ಸಮುದಾಯ. ಶಾಸಕಾಂಗ ಪ್ರಕ್ರಿಯೆಯಲ್ಲಿ ವಕೀಲರ ಕೊಡುಗೆ ಮಹತ್ವದ್ದಾಗಿದ್ದು, ಕಾರ್ಯಾಂಗದ ಲೋಪಗಳನ್ನೂ ಪ್ರಶ್ನಿಸುವ ಮೂಲಕ ಸರಿಪಡಿಸುವ ಕೆಲಸವನ್ನು ಈ ಸಮುದಾಯ ಮಾಡುತ್ತಿದೆ ಎಂದು ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ಮಾತನಾಡಿದರು.

ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಎನ್.ಆರ್.ಲೋಕಪ್ಪ, ಜಿ.ವಿ.ವಿಜಯನಂದ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಪಿ.ಎಂ.ಕಿರಣ್‌, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್‌.ಸಂತೋಷ್, ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ.ಸುಂದರರಾಜ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಪ್ರಧಾನ ಕಾರ್ಯದರ್ಶಿ ಎಸ್‌.ಎ.ಶ್ರೀನಿವಾಸ ಮತ್ತಿತರರು ಇದ್ದರು.