ಮಹಿಳೆ ಸಾಧನೆ ಹಿಂದೆ ಪುರುಷನ ಪಾತ್ರವೂ ಮುಖ್ಯ

| Published : Mar 12 2025, 12:49 AM IST

ಸಾರಾಂಶ

ಪ್ರತಿಯೊಬ್ಬ ಮಹಿಳೆ ಒಂದಿಲ್ಲ ಒಂದು ಪ್ರತಿಭೆ ಹೊಂದಿರುತ್ತಾಳೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಯಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸಿದಾಗ ಅವಳೊಬ್ಬ ಸಾಧಕಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪ್ರತಿಯೊಬ್ಬ ಮಹಿಳೆ ಒಂದಿಲ್ಲ ಒಂದು ಪ್ರತಿಭೆ ಹೊಂದಿರುತ್ತಾಳೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಯಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸಿದಾಗ ಅವಳೊಬ್ಬ ಸಾಧಕಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.

ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಥಣಿ ಮಹಿಳಾ ಘಟಕದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಒಬ್ಬ ಯಶಸ್ವಿ ಪುರುಷನ ಸಾಧನೆ ಹಿಂದೆ ಮಹಿಳೆ ಪಾತ್ರ ಇರುವಂತೆ, ಒಬ್ಬ ಮಹಿಳೆಯ ಸಾಧನೆ ಹಿಂದೆ ಪುರುಷನ ಪಾತ್ರವೂ ಅಷ್ಟೇ ಮುಖ್ಯ. ಪುರುಷ ಪ್ರಧಾನ ಈ ಸಮಾಜದಲ್ಲಿ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ ಸಮಾಜಮುಖಿ ಸೇವೆ ಮತ್ತು ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ, ಕುಟುಂಬ ಎಂಬ ಚಕ್ಕಡಿಗೆ ಗಂಡು ಮತ್ತು ಹೆಣ್ಣು ಎರಡು ಚಕ್ರಗಳಿದ್ದಂತೆ. ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಕುಟುಂಬವನ್ನು ಮುನ್ನಡೆಸುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಹಿರಿಯ ಸದಸ್ಯೆ ಜಯಶ್ರೀ ಮಹಾಜನ ಮಾತನಾಡಿ, ದೇಶದ ಸ್ವಾತಂತ್ರ್ಯ ಚಳವಳಿಯಿಂದಲೂ ಮಹಿಳೆಯರು ದೇಶಕ್ಕಾಗಿ ನಾಡಿಗಾಗಿ ಹೋರಾಡಿ ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಯೊಬ್ಬ ಮಹಿಳೆ ಶಿಕ್ಷಣ ಪಡೆದುಕೊಂಡಾಗ ಸ್ವಾವಲಂಬನೆ ಹಾಗೂ ಸ್ವಾಭಿಮಾನದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದರ ಜೊತೆಗೆ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಾಧಕ ಮಹಿಳೆಯರನ್ನು ಗುರುತಿಸಿ ಈ ಸಂಘಟನೆಯಿಂದ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವೈದ್ಯಕೀಯ, ಶಿಕ್ಷಣ, ಸಂಘಟನೆ, ಕನ್ನಡಪರ ಹೋರಾಟ, ಸಾಮಾಜಿಕ ಸೇವೆ, ಅಂಗನವಾಡಿ, ಸಂಗೀತ , ಶೈಕ್ಷಣಿಕ ಸೇವೆ, ಉದ್ಯಮ ಕ್ಷೇತ್ರ ಹೀಗೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಥಣಿ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಿಜಯಗೌಡ ನೇಮಗೌಡ ಅಧ್ಯಕ್ಷತೆ ವಹಿಸಿದ್ದರು.ನಂತರ ಪಂಡಿತ್ ಪುಟ್ಟರಾಜ ಗವಾಯಿ ಕಲಾತಂಡವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು. ಈ ವೇಳೆ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಂಚಿ, ಸದಸ್ಯೆ ಮೃಣಾಲಿನಿ ದೇಶಪಾಂಡೆ, ವಿಜಯಗೌಡ ನೇಮಗೌಡ, ಅಣ್ಣಾಸಾಬ ತೆಲಸಂಗ, ಭಾರತಿ ಅಲಿಬಾದಿ, ಯಶೋಧಾ ಕುಲಗುಡೆ, ನೀಲಾಂಬಿಕಾ ನೇಮಗೌಡ, ಈರಣ್ಣ ಅಡಿಗಲ್ಲ, ಶಶಿಕಲಾ, ಸರೋಜಾ, ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಪ್ರಿಯಂವದಾ ಹುಲಗಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ತೋರಿ ಸ್ವಾಗತಿಸಿದರು. ಭಾಗ್ಯಶ್ರೀ ಪರಿಚಯಿಸಿದರು. ಪ್ರಭಾ ಭೋರಗಾಂವಕರ ವಂದಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಶ್ರಮಿಸುತ್ತಿರುವ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದರಿಂದ ಅವರ ಸಾಧನೆಗೆ ಇನ್ನಷ್ಟು ಸ್ಫೂರ್ತಿಯಾಗಲಿದೆ.

-ಅಪ್ಪಾಸಾಹೇಬ ಅಲಿಬಾದಿ, ಸಾಹಿತಿ, ಸುವರ್ಣ ಕನ್ನಡಿಗ 2025 ಪ್ರಶಸ್ತಿ ಪುರಸ್ಕೃತರು.

ಅಥಣಿ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕವು ಅನೇಕ ಸಮಾಜಮುಖಿ ಸೇವೆಗಳ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ದಿನಾಚರಣೆಯ ನೆಪದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಗೌರವ ಸನ್ಮಾನ ಅವರ ಕಾರ್ಯಕ್ಷೇತ್ರಕ್ಕೆ ಸ್ಫೂರ್ತಿ ತುಂಬಲಿದೆ.

-ಶಿವಲೀಲಾ ಬುಟಾಳಿ, ಪುರಸಭೆ ಅಧ್ಯಕ್ಷೆ.