ದಾಬಸ್‍ಪೇಟೆ: ಭಾರತೀಯ ಪರಂಪರೆಯು ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿದೆ. ನೂರಾರು ಜಾತಿಗಳಿದ್ದರೂ ಎಲ್ಲರೂ ಶಾಂತಿ–ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಇದು ನಮ್ಮ ದೇಶದ ವಿಶೇಷ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಪ್ರಗತಿಗೆ ಮಠಗಳ ಪಾತ್ರ ದೊಡ್ಡದು. ಯಾವ ಸರ್ಕಾರಗಳೂ ಮಾಡದ ಕೆಲಸ ರಾಜ್ಯದಲ್ಲಿ ಮಠಗಳು ಮಾಡುತ್ತಿವೆ. ಜನಜಾಗೃತಿ ಮೂಡಿಸುವ ಜೊತಗೆ ಸಾಮಾಜಿಕ ಕ್ಷೇತ್ರದಲ್ಲಿ ಮಠಗಳು ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಅನ್ನದಾಸೋಹ, ಜ್ಞಾನ ದಾಸೋಹದ ಜೊತೆಗೆ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಡಾ. ಸಿದ್ದರಾಜು ಸ್ವಾಮೀಜಿ ಸಲ್ಲಿಸುವ ಸೇವೆ ಅಮೂಲ್ಯವಾದದ್ದು. ಈ ಮಠ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಮಠವಾಗಿದೆ ಎಂದರು.ನಾಡಿನ ಉದ್ದಗಲ್ಲಕ್ಕೂ ಶಿಕ್ಷಣ ಸಂಸ್ಥೆಗಳೇನಾದರೂ ತಲೆ ಎತ್ತಿದ್ದರೆ ಅದು ಮಠಗಳಿಂದ ಮಾತ್ರ. ಅಂದು ಮಠಗಳೇನಾದರೂ ಇಲ್ಲದೆ ಅಥವಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದಿದ್ದರೆ ಲಕ್ಷಾಂತರ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸಮಾಜವನ್ನು ಮುನ್ನಡೆಸುವಲ್ಲಿ ಮಠಗಳ ಪಾತ್ರ ಬಹುಮುಖ್ಯ. ಸಮಾಜಕ್ಕೆ ದಿಕ್ಸೂಚಿಯಾಗಿ ಮಠಗಳು ಇರಬೇಕು. ಆ ಹಾದಿಯಲ್ಲಿ ಪಾಲನಹಳ್ಳಿ ಮಠ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಕಳೆದ ಒಂದು ವಾರ ನಡೆದ ಧಾರ್ಮಿಕ ಕಾರ್ಯಕ್ರಮ, ಮಹಾರುದ್ರಾಯಾಗ, ದೇವರುಗಳ ಉತ್ಸವ, ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಸಿನಿಮಾ ನಟರು, ಭಕ್ತಾದಿಗಳು ಆಗಮಿಸಿದ್ದಕ್ಕೆ ಸಂತೋಷವಾಗಿದ್ದು, ಭಕ್ತರ ಸಹಕಾರ ಹೀಗೆ ಇರಲಿ ಎಂದರು.ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಮಾತಂಗ ರತ್ನ ಪ್ರಶಸ್ತಿಯನ್ನು ವಿಜಯ್ ಪದ್ಮನಾಭ್ ದಂಪತಿಗೆ, ವಿಶ್ವ ಅರುಂಧತಿ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಆದಿ ಜಾಂಭವ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ.ಮಂಜುನಾಥ್, ಗೌರಿಶಂಕರ್, ನೆ.ಲ.ನರೇಂದ್ರಬಾಬು, ವಕೀಲ ವೆಂಕಟೇಶ್ ದೊಡ್ಡೇರಿ, ಭಾಸ್ಕರ್ ಪ್ರಸಾದ್, ಮಠದ ಸಿಬ್ಬಂದಿ ವರ್ಗದವರಾದ ಪವನ್, ವಿಶ್ವನಾಥ್ ಇತರರಿದ್ದರು.
ಪೋಟೋ 4 :
ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರನ್ನು ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.