ಸಾರಾಂಶ
- ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅಭಿಮತ । ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪಿಆರ್‌ಒ, ಎಪಿಆರ್‌ಒಗಳಿಗೆ ತರಬೇತಿ ಕಾರ್ಯಾಗಾರ - - -
ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಅಂದರೆ, ರಾಜ್ಯದ ಎರಡನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಮತದಾನ ದಿನ ಸುಗಮವಾಗಿ ಮತದಾನವಾಗಲು ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸೋಮವಾರ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಆರ್‌ಒ, ಎಪಿಆರ್‌ಒಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮತಗಟ್ಟೆ ಅಧಿಕಾರಿಗಳು ಮತದಾನದ ಕಾರ್ಯ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ನಿಮಗೆ ಸಮಸ್ಯೆ ಆಗದಂತೆ ಮಾರ್ಗದರ್ಶನಕ್ಕಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತರಬೇತಿ ಜೊತೆಗೆ ನಿಮಗೆ ಕೊಡಲಾದ ಮಾರ್ಗಸೂಚಿ ಕೈಪಿಡಿಯನ್ನು ಸಂಪೂರ್ಣ ಅವಲೋಕಿಸಿ ತಿಳಿದುಕೊಂಡು, ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು, ದಾವಣಗೆರೆ ಜಿಲ್ಲೆಯಲ್ಲಿ 1693 ಮತಗಟ್ಟೆಗಳಿವೆ. ಮತದಾನದ ದಿನ ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಸಿಬ್ಬಂದಿ ಕಾರ್ಯನಿರ್ವಹಿಸುವರು. ಹೆಚ್ಚುವರಿಯಾಗಿ ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 9192 ಮತದಾನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.ತಾಲೂಕುವಾರು ಮತದಾನ ಸಿಬ್ಬಂದಿ ಆಯ್ಕೆ ವಿವರ:
ಜಗಳೂರು: ಪಿಆರ್‌ಒ 187, ಎಪಿಆರ್‌ಒ 287, ಪಿಒ 723 ಸೇರಿ 1197, ಹರಿಹರ: ಪಿಆರ್‌ಒ 320, ಎಪಿಆರ್‌ಒ 401, ಪಿಒ 697 ಸೇರಿ 1418, ದಾವಣಗೆರೆ ಉತ್ತರ: ಪಿಆರ್‌ಒ 713, ಎಪಿಆರ್‌ಒ 299, ಪಿಒ 762 ಸೇರಿ 1774, ದಕ್ಷಿಣ: ಪಿಆರ್‌ಒ 160, ಎಪಿಆರ್‌ಒ 240, ಪಿಒ 362 ಸೇರಿ 762, ಮಾಯಕೊಂಡ: ಪಿಆರ್‌ಒ 362, ಎಪಿಆರ್‌ಒ 339, ಪಿಒ 469 ಸೇರಿ 1170, ಚನ್ನಗಿರಿ: ಪಿಆರ್‌ಒ 278, ಎಪಿಆರ್‌ಒ 352, ಪಿಓ 801 ಸೇರಿ 1431 ಹಾಗೂ ಹೊನ್ನಾಳಿ: ಪಿಆರ್‌ಒ 278, ಎಪಿಆರ್‌ಒ 380, ಪಿಒ 782 ಸೇರಿ ಒಟ್ಟು 1440 ಮತದಾನ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಮತದಾನ ಸಿಬ್ಬಂದಿಗೆ ಅಂಚೆ ಮತಪತ್ರ:
ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಹ ಮತದಾನದ ದಿನ ಮತದಾನ ಮಾಡಲು ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ನಮೂನೆ 12 ಮತ್ತು ನಮೂನೆ 12ಎ ನೀಡಲಾಗುತ್ತದೆ. ತರಬೇತಿ ನಡೆದ ಸ್ಥಳಗಳಲ್ಲಿ ಮತದಾನ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿ, ಸಿಬ್ಬಂದಿಗೆ ಮೇಲಿನ ನಮೂನೆಗಳನ್ನು ವಿತರಣೆ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ವಿತರಿಸಲು ತಂಡಗಳನ್ನು ನೇಮಕ ಮಾಡಲಾಗಿತ್ತು.ಚುನಾವಣಾ ಕರ್ತವ್ಯನಿರತರಿಗೆ ಮತದಾನ ಮಾಡಲು ನೀಡುವ ನಮೂನೆಗಳು:
ಇಡಿಸಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಪಡೆದ ಎಲ್ಲರಿಗೂ ಅಂಚೆ ಮತದಾನ ಮಾಡಲು ನಮೂನೆ 12, 12ಎ ನೀಡಲಾಗುತ್ತದೆ. ಪ್ರಸ್ತುತ ಲೋಕಸಭಾ ಚುನಾವಣೆ ಆಗಿರುವುದರಿಂದ ದಾವಣಗೆರೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇತರೆ ಬೇರೆ ಜಿಲ್ಲೆಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದಲ್ಲಿ ಅಂತಹ ಚುನಾವಣಾ ಕರ್ತವ್ಯ ಸಿಬ್ಬಂದಿಗೆ ನಮೂನೆ 12 ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು. ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಾಗಿದ್ದಲ್ಲಿ ಅವರಿಗೆ ನಮೂನೆ 12ಎ ವಿತರಣೆ ಮಾಡಲಾಗುತ್ತದೆ. 12ಎ ನಮೂನೆ ಪಡೆದವರು ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತದಾನ ಮಾಡುವರು. 12 ನಮೂನೆ ಪಡೆದವರು ಸೌಲಬ್ಯ ಕೇಂದ್ರಗಳಲ್ಲಿ ಮತದಾನ ಮಾಡುವರು ಎಂದು ತಿಳಿಸಿದರು.- - - -8ಕೆಡಿವಿಜಿ33, 34ಃ:
ದಾವಣಗೆರೆಯಲ್ಲಿ ಸೋಮವಾರ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಆರ್‌ಒ, ಎಪಿಆರ್‌ಒಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿದರು.