ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭವ್ಯ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯ ಎಂದು ನಿವೃತ್ತ ಶಿಕ್ಷಕ ಕೆ.ಪಿ.ವೀರಪ್ಪ ಹೇಳಿದರು.ತಾಲೂಕಿನ ಕೀಲಾರ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಠ್ಯ ವಿಷಯಗಳನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ. ಮಕ್ಕಳಿಗೆ ಶೈಕ್ಷಣಿಕವಾಗಿ ಸರಿಯಾದ ಮಾರ್ಗದರ್ಶನ ನೀಡುವುದು. ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು. ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿಸುವ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೂ ಶಿಕ್ಷಕರಾದವರ ಕೆಲಸ ಎಂದು ಕಿವಿಮಾತು ಹೇಳಿದರು.
ತಂದೆ-ತಾಯಿಯನ್ನು ಬಿಟ್ಟರೆ ಗುರುಗಳಿಗೆ ಮಕ್ಕಳನ್ನು ತಿದ್ದುವ ಸಾಮರ್ಥ್ಯವಿದೆ. ಶಿಕ್ಷಕರಾದವರು ವೃತ್ತಿಗೆ ಕಳಂಕ ಬಾರದಂತೆ ಕರ್ತವ್ಯ ನಿರ್ವಹಿಸಿದಾಗ ವೃತ್ತಿ ಪಾವಿತ್ರ್ಯತೆ ಹೆಚ್ಚುತ್ತದೆ. ಸಮಾಜ ನಿಮ್ಮನ್ನು ಗುರುತಿಸಿ ಗೌರವಿಸುತ್ತದೆ. ಸರ್ಕಾರಿ ಶಾಲೆಗಳಿಗೆ ಬರುವ ಬಡ-ಕೂಲಿ ಕಾರ್ಮಿಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಂತೆ ಸಲಹೆ ನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲಾ ಮಕ್ಕಳೊಂದಿಗೆ ಪೈಪೋಟಿ ನೀಡಲು ಸಾಧ್ಯ. ಪೋಷಕರನ್ನು ಆಕರ್ಷಿಸುವ ರೀತಿಯಲ್ಲಿ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸಿದಾಗ ಅವರು ದೇಶದ ಸತ್ಪ್ರಜೆಗಳಾಗಲು ಸಾಧ್ಯ ಎಂದು ನುಡಿದರು.
ಸರ್ಕಾರಿ ಶಾಲೆಯಲ್ಲೂ ಪ್ರತಿಭಾವಂತ ಮಕ್ಕಳಿದ್ದಾರೆ. ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಕರು ಶ್ರಮವಹಿಸಬೇಕು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಕ್ರಿಯಾಶೀಲವಾಗಿ ಬೆಳವಣಿಗೆ ಸಾಧಿಸುವಂತೆ ಮಾಡಿದಾಗ ಶಿಕ್ಷಕ ವೃತ್ತಿಗೆ ಸಾರ್ಥಕತೆ ಸಲ್ಲಿಸಿದಂತಾಗುವುದು ಎಂದರು.ಶಿಕ್ಷಕ ಕುಮಾರಸ್ವಾಮಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಭವ್ಯ, ಸದಸ್ಯರಾದ ವಿನುತಾ, ವೀರೇಶ್, ಮಧುಸೂಧನ್ ಹಾಗೂ ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು.