ಪ್ರತಿಯೊಬ್ಬ ಮಗುವಿನ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರಿಗೆ ಮತ್ತಷ್ಟು ಗೌರವ ನೀಡುವ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಹೆಸರಿನ ಮುಂದೆ ಟಿಆರ್ ಎಂಬ ಪ್ರತ್ಯಯ ಬಳಸಲು ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿ: ಪ್ರತಿಯೊಬ್ಬ ಮಗುವಿನ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಶಿಕ್ಷಕರಿಗೆ ಮತ್ತಷ್ಟು ಗೌರವ ನೀಡುವ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಹೆಸರಿನ ಮುಂದೆ ಟಿಆರ್ ಎಂಬ ಪ್ರತ್ಯಯ ಬಳಸಲು ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನೋತ್ಸವದ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಕಾರ್ಯಕ್ರಮಗಳು ಬಂದಾಗ ಅವುಗಳ ಜವಾಬ್ದಾರಿ ಶಿಕ್ಷಕರ ಮೇಲೆ ಹೆಚ್ಚಾಗುತ್ತದೆ. ಇದರಿಂದ ಶಿಕ್ಷಕರಿಗೆ ಹೊರೆ ಆಗಬಹುದು. ಆದರೆ, ಇಂತಹ ಕಾರ್ಯಗಳು ದೇಶಕ್ಕೆ ಸಲ್ಲಿಸುವ ಸೇವೆಯ ಒಂದು ಭಾಗ. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದರು.
ನಾನು ಉಪಸಭಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕನ್ನಡ ಶಾಲೆಗಳ ದುಸ್ಥಿತಿ ಕುರಿತು ಚರ್ಚೆ ಮಾಡುವ ಅವಕಾಶ ದೊರೆತಿತ್ತು. ಸರ್ಕಾರಿ ಶಾಲೆಗಳನ್ನು ಸುಧಾರಿಸುವ ಉದ್ದೇಶದಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 75 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿದೆ. ಎಲ್‌ಕೆಜಿ, ಯುಕೆಜಿಯಿಂದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದವರೆಗೆ ಒಂದೇ ಶಾಲೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಜಿಲ್ಲೆಯ 184 ಶಾಲೆಗಳಲ್ಲಿ ದ್ವಿಭಾಷಾ ಕಲಿಕೆ ಆರಂಭಿಸಲಾಗಿದೆ. ಕೆಪಿಎಸ್ ಶಾಲೆಗಳ ಜತೆಗೆ ದ್ವಿಭಾಷಾ ಶಿಕ್ಷಣ ನೀತಿಗೂ ಮಂಜೂರಾತಿ ಪಡೆದು ಅನುಷ್ಠಾನಗೊಳಿಸಲಾಗಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಕಲಿಯುವುದರಿಂದ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸುವುದರ ಜತೆಗೆ, ಬೇರೆ ಭಾಷೆಗಳ ಜ್ಞಾನ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಶಿಕ್ಷಣ ಎಂಬುದು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಶಿಕ್ಷಣಕ್ಕೆ ಕೇವಲ ಮೂಲಸೌಕರ್ಯವಷ್ಟೇ ಸಾಲದು; ಶಿಕ್ಷಕರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು. ಶಿಕ್ಷಣ ಒಂದು ಕಲೆ. ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಪಾಠ ಮಾಡಬೇಕು. ನೂತನ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಕಲಿಸಬೇಕು. ಉತ್ತಮ ಸಮಾಜ ಹಾಗೂ ದೇಶಕ್ಕೆ ಶಕ್ತಿ ನೀಡುವ ನಾಗರಿಕರನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ತಲೆಮಾರು ಬದಲಾವಣೆ ಮಾಡುವ ಶಕ್ತಿ ಶಿಕ್ಷಕರಿಗಿದೆ. ಮತ್ತಷ್ಟು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 21 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 12 ಶಿಕ್ಷಕರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಲಾಯಿತು.
ಡಿಡಿಪಿಐ ಮೋಹನ್ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಯೆಟ್ ಪ್ರಾಚಾರ್ಯ ಝೆಡ್.ಎಂ. ಖಾಜಿ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಂ. ಮೈದೂರ, ಹೂಡಾ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಸಿಇಒ ದಲ್ಜಿತಕುಮಾರ, ತಹಸೀಲ್ದಾರ್ ಕೆ. ಶರಣಮ್ಮ, ನಿರಂಜನ್ ಮೂರ್ತಿ, ಸುರೇಶಕುಮಾರ ಎನ್., ಎಂ.ಎಚ್. ಪಾಟೀಲ, ಬಿ.ಎಂ. ಬೇವಿನಮರದ, ಎಸ್.ಪಿ. ಮೂಡಲದವರ, ಜಗದೀಶ ಜೋಗಿಹಳ್ಳಿ, ಮರಡೆಪ್ಪ ಕಂತಿ, ಮಲ್ಲಿಕಾರ್ಜುನ ಶಾಂತಗಿರಿ, ಆರ್.ಎಚ್. ಬೆಟ್ಟಳ್ಳೆರ, ಎನ್.ಎನ್. ಕುಂದೂರ, ಡಿ.ಡಿ. ಲಂಗೋಟಿ, ಎಂ.ಬಿ. ರಮೇಶ, ಎಸ್.ಎಸ್. ನಿಸ್ಸೀಮಗೌಡ್ರ ಸೇರಿದಂತೆ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಪೊಲೀಸ್ ಇಲಾಖೆಯಲ್ಲಿ ಹೋಂ ಗಾರ್ಡ್‌ಗಳು, ಅಂಗನವಾಡಿಯಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯಲ್ಲಿ ನರ್ಸಗಳು ಸೇರಿದಂತೆ ವಿವಿಧ ಹಂತದ ಸಿಬ್ಬಂದಿ ಕೆಲಸದ ಹೊರೆ ಕಡಿಮೆ ಮಾಡುತ್ತಾರೆ. ಅದೇ ರೀತಿ ಶಿಕ್ಷಕರಿಗೆ ವಿವಿಧ ಹಂತದ ಗಣತಿ ಕಾರ್ಯಗಳ ಹೊರೆ ಕಡಿಮೆ ಮಾಡಿದರೆ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಜಿಲ್ಲೆಯ ಶಿಕ್ಷಕರು ಇನ್ನಷ್ಟು ಸಿದ್ಧರಾಗುತ್ತಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಕರಿಗಾರ ಹೇಳಿದರು.
ಶಿಕ್ಷಕರ ಹೆಚ್ಚು ಶ್ರಮದಿಂದ ಹಾವೇರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಉತ್ತಮ ಸ್ಥಾನ ಗಳಿಸಿದೆ. ಶಿಕ್ಷಕರ ವ್ಯಕ್ತಿತ್ವ, ಕಾರ್ಯವೈಖರಿ ಹಾಗೂ ದಿನಚರಿಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಅಭಿನಂದನೀಯ. ಉತ್ತಮ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಒಡಕುಗಳನ್ನು ಬದಿಗೊತ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.