ಸಾರಾಂಶ
ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ತುಳುನಾಡು ಶಿಕ್ಷಣ ಸಂಸ್ಥೆ ಮತ್ತು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ತನ್ನ ವೃತ್ತಿಯನ್ನು ಪ್ರೀತಿಸುತ್ತ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಮತ್ತು ಸಂಸ್ಕಾರವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವವರು ಉತ್ತಮ ಶಿಕ್ಷಕರು ಎಂದು ತುಳುನಾಡು ಶಿಕ್ಷಣ ಸಂಸ್ಥೆ ಮತ್ತು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದರು.ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಜೀವನ ಮೌಲ್ಯಗಳನ್ನು, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕು. ನಾವು ಉತ್ತಮ ಮನುಷ್ಯ ಮತ್ತು ನಾಗರಿಕನಾಗಲು ಶಿಕ್ಷಕರಿಲ್ಲದೆ ಖಂಡಿತ ಸಾಧ್ಯವಿಲ್ಲ. ತಂದೆ ತಾಯಿಗಳಂತೆ ಗುರುಗಳು ಸಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಎಂ.ಬಿ ಪುರಾಣಿಕ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಜೀವಮಾನದ ಸಾಧನೆಗಾಗಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಬೋಧನೆ ಕೇವಲ ಒಂದು ವೃತ್ತಿಯಲ್ಲ, ಅದು ಒಂದು ಜೀವನ ಶೈಲಿ. ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶಕರಾದ ತನ್ನ ಶಿಕ್ಷಕರನ್ನು ಪ್ರೀತಿಯಿಂದ ನೆನಪಿಸಿಕೊಂಡರು.ಶೈಕ್ಷಣಿಕ ಸಮಿತಿಯ ಸದಸ್ಯ ಪ್ರೊ.ವಿನಯ್ ಕುಮಾರ್ ಅವರು ತಾವು ಶಿಕ್ಷಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು, ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮುಖ್ಯ. ನಮ್ಮ ಬದುಕಿನಲ್ಲಿ ಪ್ರತಿಯೊಂದು ಶಿಕ್ಷಕರನ್ನು ಸ್ಮರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಖಂಡಿತ ಎಂದರು.ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್‌ಖಾನ್, ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್.ನಾಯಕ್, ವಾಸ್ತುಶಿಲ್ಪ ತಜ್ಞೆಯಾದ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್, ಶೈಕ್ಷಣಿಕ ಸಮಿತಿಯ ಸದಸ್ಯ ಪ್ರೊ.ವಿನಯ್ ಕುಮಾರ್, ಕೋಚಿಂಗ್ ಮುಖ್ಯಸ್ಥ ಶ್ರೀ ಕರುಣಾಕರ ಬಳ್ಕೂರು, ಕೋಚಿಂಗ್ ಸಹಾಯಕ ಪ್ರಮೋದ್ ಕಿಣಿ ಇದ್ದರು.ವಿದ್ಯಾರ್ಥಿಗಳಾದ ಧನ್ಯ ಮತ್ತು ದಮಾನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷೆ ಬ್ರಾಹ್ಮಿ ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ನಿಹಾರಿಕಾ ವಂದಿಸಿದರು. ಬಳಿಕ ಉಪನ್ಯಾಸಕ ವೃಂದದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.-------------