ಬಂಜಾರ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ. ದೇವಾನುದೇವತೆಗಳ ಜತೆಗೆ ಪಗಡೆ ಆಡುತ್ತಿದ್ದವರು. ತಿರುಪತಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂತ ಸೇವಾಲಾಲ್‌ರಂತಹ ಅನೇಕ ಸಂತರು, ದಾರ್ಶನಿಕರು ದೇಶದ ಆಸ್ತಿಗಳಾಗಿದ್ದಾರೆ. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ನೆನೆಯಲೇಬೇಕಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶ ಕಟ್ಟುವಲ್ಲಿ ಬಂಜಾರ ಸಮುದಾಯದ ಪಾತ್ರ ಮಹತ್ತರವಾದುದು ಎಂದು ಬಂಜಾರು ಸಮುದಾಯದ ಮುಖಂಡ ಕೋಟೆ ಕೃಷ್ಣ ನಾಯಕ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜರ ೨೮೭ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರ ಸಮುದಾಯವು ಶ್ರಮಿಕ ವರ್ಗವಾಗಿದ್ದು, ರಾಜ ಮಹಾರಾಜರ ಕಾಲದಿಂದ ಹಿಡಿದು ಬ್ರಿಟಿಷರವರೆಗೂ ಯುದ್ಧಕ್ಕೆ ಸಲಕರಣೆಗಳನ್ನು ಸಿದ್ಧಗೊಳಿಸಿಕೊಟ್ಟಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ಬಂಜಾರ ಸಮುದಾಯವು ದೇಶದಲ್ಲಿರುವ ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯೊಂದಕ್ಕೆ ಲಮಾಣಿ ಮಾರ್ಗವೆಂದು ಹೆಸರಿಡಲಾಗಿದೆ. ಜತೆಗೆ ರೈಲ್ವೆ ಹಳಿಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಬಂಜಾರ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ. ದೇವಾನುದೇವತೆಗಳ ಜತೆಗೆ ಪಗಡೆ ಆಡುತ್ತಿದ್ದವರು. ತಿರುಪತಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂತ ಸೇವಾಲಾಲ್‌ರಂತಹ ಅನೇಕ ಸಂತರು, ದಾರ್ಶನಿಕರು ದೇಶದ ಆಸ್ತಿಗಳಾಗಿದ್ದಾರೆ. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ನೆನೆಯಲೇಬೇಕಿದೆ ಎಂದು ಹೇಳಿದರು.

ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಉಪಾಧ್ಯಕ್ಷ ಎಲ್.ಅಶೋಕ್, ಮಾಜಿ ಸದಸ್ಯ ನರಸಿಂಹಾಚಾರಿ, ಬಂಜಾರ ಸಮುದಾಯದ ಮುಖಂಡರಾದ ಮುನಿನಾಯಕ, ಶ್ರೀನಿವಾಸ್ ನಾಯಕ, ಕೃಷ್ಣಮೂರ್ತಿ ನಾಯಕ, ಶಿವನಾಯಕ, ಗೌರಿಬಾಯಿ, ಬಿಜೆಪಿ ಟೌನ್ ಅಧ್ಯಕ್ಷ ಎನ್.ಸೋಮಶೇಖರ್, ಮುಖಂಡರಾದ ಎಂ.ರಾಜಕುಮಾರ್, ಚಿಕ್ಕಮರಳಿ ನವೀನ್, ಆಟೋ ಮಲ್ಲೇಶ್ ಇತರರಿದ್ದರು.