ಸಾರಾಂಶ
ಗೀತಾ ಅಭಿಯಾನದ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಯಲ್ಲಾಪುರಅನೇಕ ವರ್ಷಗಳಿಂದ ನಾಡಿನಾದ್ಯಂತ ಗೀತಾ ಅಭಿಯಾನ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಗೀತೆಯ ಚಿಂತನೆ, ಸಂದೇಶ ಮಕ್ಕಳ ಜೀವನಕ್ಕೆ ಉತ್ತಮ ಬೋಧನೆ ನೀಡುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ, ಶಾಂತಿ, ಗೊಂದಲಗಳಿಗೆ ಪರಿಹಾರ ದೊರೆಯುತ್ತದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಭಗವದ್ಗೀತೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಹೇಳಿದರು.
ಬುಧವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಂಸ್ಕೃತ ವೇದ ಪಾಠಶಾಲಾ ಸಭಾಭವನದಲ್ಲಿ ಪ್ರಸಕ್ತ ಸಾಲಿನ ೧೮ ನೇ ವರ್ಷದ ಗೀತಾ ಅಭಿಯಾನದ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ನಿತ್ಯ ಗೀತೆಯ ಪಠಣದಿಂದ ಜ್ಞಾನಶಕ್ತಿಯು ಕೂಡ ಹೆಚ್ಚುತ್ತದೆ ಎಂಬುದನ್ನು ಪ್ರಾಜ್ಞರು ಹೇಳಿದ್ದಾರೆ. ಅಲ್ಲದೇ ಸನ್ಮಾರ್ಗದ, ಧರ್ಮದ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸಲು ಪ್ರೇರಣೆ ನೀಡುತ್ತದೆ. ಆ ದೃಷ್ಟಿಯಿಂದ ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಕೇಂದ್ರಗಳನ್ನು ನಡೆಸಿ, ಈ ಅಭಿಯಾನ ಯಶಸ್ವಿಯಾಗಲು ನಮ್ಮೆಲ್ಲರ ಸಹಕಾರವಿದೆ ಎಂದರು.
ಯಕ್ಷಗಾನ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಹೊಡೆಯುವುದನ್ನು, ಶಿಕ್ಷೆ ನೀಡುವುದನ್ನು ನಿಲ್ಲಿಸಿದ ಪರಿಣಾಮವೇ ಇಂದು ಪೊಲೀಸರಿಗೆ ಲಾಟಿ ಬೇಕಾಗುತ್ತಿದೆ. ಇದಕ್ಕೆ ಪಾಲಕರ ಅತಿಯಾದ ಪ್ರೀತಿಯ ಪರಿಣಾಮವೇ ಕಾರಣ. ತಪ್ಪು ಮಾಡಿದವನಿಗೆ ಶಿಕ್ಷೆ ನೀಡಿದಾಗ ಮಾತ್ರ ಅರಿವಾಗುತ್ತದೆ. ಇಂದು ಅನೇಕರು ಗೀತೆಯ ಕುರಿತು ಟೀಕೆ ಮಾಡುವವರಿದ್ದಾರೆ. ಅದರ ಅರ್ಥವನ್ನು ತಿಳಿದುಕೊಳ್ಳದೇ ಮಾಡುತ್ತಿದ್ದಾರೆ.ಪ್ರತಿಯೊಬ್ಬನೂ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಲು ಗುಣಕರ್ಮದಿಂದ ಮಾತ್ರ ಸಾಧ್ಯ. ಹುಟ್ಟಿನಿಂದ ಜಾತಿಯನ್ನು ನಿರ್ಧರಿಸಬಾರದು. ಗುಣಕರ್ಮಗಳಿಂದ ವಿಭಾಗಿಸುವ ಚಿಂತನೆಯನ್ನು ಗೀತೆ ಉಪದೇಶ ಮಾಡುತ್ತದೆ ಎಂದರು.
ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಗೀತಾ ಅಭಿಯಾನಕ್ಕೆ ರಾಜ್ಯವ್ಯಾಪಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಗೀತೆಯ ಪಠಣದಿಂದ ಜೀವನ ಸಾರ್ಥಕತೆ, ಉತ್ತಮ ಸಮಾಜದ ನಿರ್ಮಾಣ, ಆಸ್ತಿಕತೆಯ ಭಾವ ಎಲ್ಲವೂ ಸಾಧ್ಯ ಎಂದರು.ದೈಹಿಕ ಅಧೀಕ್ಷಕ ಪ್ರಕಾಶ ತಾರೀಕೊಪ್ಪ, ಪ್ರಶಾಂತ ಜಿ.ಎನ್., ಸಂಪನ್ಮೂಲ ವ್ಯಕ್ತಿ ರಾಧಾ ದೇಸಾಯಿ, ನಾಗರತ್ನಾ ಭಟ್ಟ ಉಪಸ್ಥಿತರಿದ್ದರು. ಸೀತಾ ಭಟ್ಟ, ಭಾರತೀ ಬೋಡೆ ಭಗವದ್ಗೀತೆ ಪಠಿಸಿದರು. ಡಾ. ಶಂಕರ ಭಟ್ಟ ಬಾಲಿಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ ವಂದಿಸಿದರು.