ದೇಶದಲ್ಲಿ ಸಹಕಾರ ರಂಗದ ಪಾತ್ರ ದೊಡ್ಡದ್ದು

| Published : Jan 11 2025, 12:49 AM IST

ಸಾರಾಂಶ

ಮನುಷ್ಯ ಸಂಘಜೀವಿ, ಸಹಕಾರಿ ರಂಗದಲ್ಲಿ ಎಲ್ಲರನ್ನು ಒಳಗೊಂಡು ಪರಿಶ್ರಮದಿಂದ ಕೆಲಸ ಮಾಡಿದಾಗ ಮಾತ್ರ ಕಾರ್ಯ ಯಶಸ್ವಿಯಾಗುತ್ತದೆ

ಗದಗ: ಸಹಕಾರ ರಂಗ ನಮ್ಮ ದೇಶದಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ ಎಂದು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಬೆಂಗಳೂರು ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ನಗರದ ದಿ.ಕೆ.ಸಿ.ಸಿ.ಬ್ಯಾಂಕ್ ಸಭಾ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ನೂತನವಾಗಿ ನೋಂದಣಿಯಾದ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಮನುಷ್ಯ ಸಂಘಜೀವಿ, ಸಹಕಾರಿ ರಂಗದಲ್ಲಿ ಎಲ್ಲರನ್ನು ಒಳಗೊಂಡು ಪರಿಶ್ರಮದಿಂದ ಕೆಲಸ ಮಾಡಿದಾಗ ಮಾತ್ರ ಕಾರ್ಯ ಯಶಸ್ವಿಯಾಗುತ್ತದೆ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಎಸ್.ಎಸ್. ಕಬಾಡೆ ಮಾತನಾಡಿ, 120 ವರ್ಷಗಳ ಹಿಂದೆ ಆರಂಭವಾದ ಸಹಕಾರ ಚಳವಳಿ ಬೃಹತ್ತಾಗಿ ಬೆಳೆದು ಮಹತ್ತರ ಸಾಧಿಸಿದೆ. ಸಹಕಾರ ಚಳವಳಿ ಬೆಳೆಯಬೇಕಾದುದು,ಸಾಧಿಸಬೇಕಾದುದು ಇನ್ನೂ ಇದೆ ಎಂಬ ಭಾವನೆ ಎಲ್ಲರಲ್ಲಿದೆ. ಸಹಕಾರ ಚಳವಳಿ ಬೆಳವಣಿಗೆ, ಸಾಧನೆಗೆ ಹಲವಾರು ಮೂಲಗಳಿಂದ ನೆರವು ದೊರಕಿದೆ. ಜನರ ನಂಬಿಕೆ, ವಿಶ್ವಾಸ, ಸರ್ಕಾರಗಳ ಬೆಂಬಲ, ಪ್ರೋತ್ಸಾಹ, ದೊಡ್ಡ ಪ್ರಮಾಣದಲ್ಲಿ ಲಭಿಸಿದೆ. ಅದರ ಜತೆಗೆ ಸಹಕಾರ ತತ್ವಗಳಲ್ಲಿ ಒಂದಾದ ಸಹಕಾರ ಸಂಸ್ಥೆಗಳ ನಡುವೆ ಪರಸ್ಫರ ಸಹಕಾರ ಪ್ರಕ್ರಿಯೆಯ ಕೊಡುಗೆಯೂ ದೊಡ್ಡದಿದೆ ಎಂದರು.

ಕೆಸಿಸಿ ಬ್ಯಾಂಕ್ ಜಿಲ್ಲಾ ನಿಯಂತ್ರಣಾಧಿಕಾರಿ ಎಸ್.ಜಿ. ಆಲದಕಟ್ಟಿ ಮಾತನಾಡಿ, ಪ್ರತಿ ಸಹಕಾರ ಸಂಘಗಳು ತಮ್ಮ ಬ್ಯಾಂಕ್ ಖಾತೆ ಸಹಕಾರಿ ವಲಯದ ಬ್ಯಾಂಕುಗಳಲ್ಲೇ ತೆರೆಯುವುದು ಸೂಕ್ತ,ಇದರಿಂದ ಸಹಕಾರ ವಲಯ ಶಕ್ತಿಯುತವಾಗುತ್ತದೆ. ಸಹಕಾರ ರಂಗ ಗಟ್ಟಿಯಾಗಿರುವ ದೇಶಗಳು ಆರ್ಥಿಕವಾಗಿ ಬಲಿಷ್ಠವಾಗಿರುತ್ತದೆ. ನಮ್ಮ ದೇಶದಲ್ಲಿ ಹಲವು ರಾಜ್ಯಗಳು ಇದರಿಂದ ಬಲಿಷ್ಠವಾಗಿವೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಸಹಕಾರ ಯುನಿಯನ್‌ ನಿರ್ದೇಶಕ ಎಸ್.ಕೆ. ಕುರಡಗಿ ಮಾತನಾಡಿದರು.

ತರಬೇತಿ ಕಾರ್ಯಾಗಾರದಲ್ಲಿ ಸಹಕಾರ ಕಾಯ್ದೆ ಮುಖ್ಯಾಂಶಗಳು, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ, ಜವಾಬ್ದಾರಿಗಳ ಕುರಿತು ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಜಿ.ಕುಲಕರ್ಣಿ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು.

ಎಸ್.ಎನ್. ಬಡಿಗೇರ ಪಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.