ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ವಿದ್ಯಾರ್ಥಿಗಳು ಪದವಿಯ ನಂತರ ಸಮಗ್ರ ಜ್ಞಾನ ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಪಿಜೆ ಅಬ್ದುಲ್ ಕಲಾಂ ಜ್ಞಾನಸಂಗಮ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದ ನಂತರ ಹೊಸ ಸವಾಲು ಎದುರಿಸಲು ಸಿದ್ಧರಾಗಿ ಜ್ಞಾನವಂತ, ಕೌಶಲ್ಯಪೂರ್ಣ ಮತ್ತು ಶಸಕ್ತ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕಾಲಿಡುವ ಮೂಲಕ ಯಶಸ್ಸು ಗಳಿಸಲು ಮುಂದಾಗಬೇಕು. ಸ್ವಾತಂತ್ರ್ಯಮತ್ತು ನ್ಯಾಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಹೆಸರಿನ ವಿಶ್ವವಿದ್ಯಾಲಯ ಇದಾಗಿದ್ದು, ರಾಣಿ ಚನ್ನಮ್ಮ ಎಂದರೆ ಅದಮ್ಯ ರಾಷ್ಟ್ರಪ್ರೇಮ, ಸ್ವಾಭಿಮಾನ ಹಾಗೂ ಸ್ತ್ರೀಶಕ್ತಿಯ ಸಂಕೇತ. ಬೆಳಗಾವಿ-ವಿಜಯಪುರ ಭಾಗದ ಜನರಿಗೆ ಜ್ಞಾನದ ಬೆಳಕು ಹಂಚುವ ಮಹತ್ತರ ಪಾತ್ರ ವಹಿಸಿಕೊಂಡಿದೆ. ವಿಶ್ವವಿದ್ಯಾಲಯದ ಬೆಳವಣಿಗೆ ಒಂದು ಭಾಗದ ಅಭಿವೃದ್ಧಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರದ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.ಉನ್ನತ ಶಿಕ್ಷಣ ಸಮಾಜದ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಅದು ರಾಷ್ಟ್ರದ ಭವಿಷ್ಯ ರೂಪಿಸುವುದು ಮಾತ್ರವಲ್ಲದೆ ನಾವಿನ್ಯತೆಗೆ ಉತ್ತೇಜಿಸುತ್ತದೆ. ಸಮಾನ ಮತ್ತು ಪ್ರಗತಿಶೀಲ ಸಮಾಜ ಸೃಷ್ಟಿಸುತ್ತದೆ. ವಿಶ್ವವಿದ್ಯಾಲಯ ಕೇವಲ ಪದವಿ ಉತ್ಪಾದಿಸುವ ಕಾರ್ಖಾನೆಗಳಲ್ಲ. ವಿಷಯಜ್ಞಾನ ಕಾರ್ಯಗಳಿಗೆ ಅಳವಡಣಾಶಕ್ತಿ, ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿ ಪೋಷಿಸುವ ಕೇಂದ್ರಗಳಾಗಬೇಕು. ಪದವಿಯ ನಂತರ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಸಲಹೆಗಾರ, ಅಂತಾರಾಷ್ಟ್ರೀಯ ಖ್ಯಾತ ವಿಜ್ಞಾನಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮಾಜಿ ಹಿರಿಯ ಅಧಿಕಾರಿ ಮಂಗಳೂರಿನ ಡಾ.ಇಡ್ಯಾ ಕರುಣಾಸಾಗರ ಮಾತನಾಡಿ, ಇಂದಿನ ಯುವ ಪೀಳಿಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ, ಧೈರ್ಯ, ಶೌರ್ಯ ಮತ್ತು ಪ್ರತಿಭಟನೆಯ ಪ್ರತೀಕವಾದ ರಾಣಿ ಚನ್ನಮ್ಮ ಹೆಸರನ್ನು ಸ್ಮರಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ನಡೆಸಿವೆ. ಯುವ ಪದವೀಧರರು ಎಲ್ಲಾ ಕೌಶಲ್ಯಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ಅವರ ಮುಂದಿನ ವೃತ್ತಿಜೀವನದ ಸವಾಲಾಗಿದೆ. ಭಾರತದಲ್ಲಿ ಪ್ರತಿ ವರ್ಷ ಮಿಲಿಯನ್ ಲೆಕ್ಕದಲ್ಲಿ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತಾರೆ. ಕೇವಲ ಮಿಲಿಯನ್ ನಷ್ಟು ಜನರು ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗುತ್ತಾರೆ. ಭಾರತದಲ್ಲಿ ವಾರ್ಷಿಕ ಪದವೀಧರರ ಸಂಖ್ಯೆ ಕೇವಲ 5.6 ಮಿಲಿಯನ್ ಇದೆ. ಅವರಲ್ಲಿ ನೀವೂ ಒಬ್ಬರಾಗಿರುವುದು ಅದೃಷ್ಟವಂತರು ಎಂದರು.
ಚಿನ್ನದ ಪದಕ:ಘಟಿಕೋತ್ಸವದಲ್ಲಿ ಒಟ್ಟು 38,512 ವಿದ್ಯಾರ್ಥಿಗಳು ಪದವಿ ಮತ್ತು 5909 ಸ್ನಾತಕೋತ್ತರ ಪದವಿ ಪಡೆದುಕೊಂಡರು. ಎಂ.ಎ(ಕನ್ನಡ) ವಿಷಯದಲ್ಲಿ ರ್‍ಯಾಂಕ್ ಗಳಿಸಿದ ಮತ್ತು ವಿಷಯವಾರು ಹೆಚ್ಚಿನ ಅಂಕ ಪಡೆದ ಮಹೇಶ್ವರಿ ತೇಗೂರಗೆ ಎರಡು ಚಿನ್ನದ ಪದಕ, ಎಂ.ಎ (ಸಮಾಜಶಾಸ್ತ್ರ) ವಿಷಯದಲ್ಲಿ ಐಶ್ವರ್ಯಾ ಪಾಟೀಲ, ಎಂ,ಎ (ಪತ್ರಿಕೋದ್ಯಮ) ಸಂಜೀವಿನಿ ಉಳ್ಳೇಗಡ್ಡಿ, ಬಿ.ಕಾಂ- ವಿನಾಯಕ ತೇಲಿ, ಬಿ.ಎಸ್ಸಿ- ಕುಮಾರೇಶ ಕಾತರಕಿ, ಎಂಬಿಎ-ಪೂರ್ಣಿಮಾ ದೇಸಾಯಿ, ಎಂ.ಎಸ್ಸಿ(ಗಣಿತ) ವಿಷಯದಲ್ಲಿ ಶಿವಕುಮಾರ ಸರದಾರ ಹಾಗೂ ವಿಷಯವಾರು ಹೆಚ್ಚಿನ ಅಂಕ ಗಳಿಸಿದ ವಿನಯ ಘೂಳಪ್ಪನವರ, ಸುಜಾತಾ ಕೇಸ್ತಿ, ನಿವೇದಿತಾ ಕಾಟಕರ, ಸಂಗೀತಾ ಬಸನಗೌಡರ ಅವರಿಗೆ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು. 123 ಪಿಎಚ್.ಡಿ. ಪದವಿ ಪ್ರದಾನ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇ-ವಿದ್ಯಾ ಅಪ್ಲಿಕೇಶನ್ ಬಿಡುಗಡೆ ಮಾಡಲಾಯಿತು.
ಗೌರವ ಡಾಕ್ಟರೇಟ್ ಪದವಿ ಪ್ರದಾನ: ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಪದ್ಮಶ್ರೀ, ಪಂ.ಎಸ್. ಬಾಳೇಶ ಭಜಂತ್ರಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗೋಪಾಲ ದೇವೇಂದ್ರ ಜಿನಗೌಡ ಹಾಗೂ ನಾಗರಿಕ, ಕ್ರೀಡೆ, ಲೋಕೋಪಕಾರಿ ಸೇವಾ ಕ್ಷೇತ್ರದಲ್ಲಿ ಗೋಪಾಲ ಬಿ. ಹೊಸೂರ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.