ಸಾರಾಂಶ
ಹಾನಗಲ್ಲ: ಸರಕಾರಿ ನೌಕರರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ನೌಕರರ ಸಂಘದ ಪಾತ್ರ ಬಹು ಮುಖ್ಯವಾಗಿದ್ದು, ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಕ್ಕೂ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುವುದು ಜವಾಬ್ದಾರಿ ಎಂಬುದನ್ನು ಅರಿತು ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ತಿಳಿಸಿದರು.ಶನಿವಾರ ಹಾನಗಲ್ಲಿನ ಗುರುಭವನದಲ್ಲಿ ಸರಕಾರಿ ನೌಕರರ ಸಂಘದ ಹಾನಗಲ್ಲ ತಾಲೂಕು ಘಟಕದ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸರಕಾರಿ ಉದ್ಯೋಗಿಗಳ ಮೇಲೆ ಈಗ ಹೆಚ್ಚಿನ ಜವಾಬ್ದಾರಿ ಇದೆ. ಅಂತಹ ಸಂದರ್ಭಗಳಲ್ಲಿ ಹಲವು ಟೀಕೆ ಟಿಪ್ಪಣೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೌಕರರ ಬೆಂಗಾವಲಾಗಿ ಸಂಘಗಳು ನಿಲ್ಲಬೇಕು. ವಿಶೇಷವಾಗಿ ಶಿಕ್ಷಕ ವೃತ್ತಿಯಲ್ಲಿರುವವರ ಮೇಲೆ ಪಾಲಕರ ದೊಡ್ಡ ನಿರೀಕ್ಷೆ ಇದೆ. ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಅತ್ಯಂತ ಮುಖ್ಯವಾದುದು. ಹೈಟೆಕ್ ವೃದ್ಧಾಶ್ರಮಗಳು ಚಾಲ್ತಿಯಲ್ಲಿವೆ ಎಂದು ಎಚ್ಚರಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಏಳನೇ ವೇತನ ಆಯೋಗದ ಜಾರಿಗೆ ಸರಕಾರ ಮಾಡುತ್ತಿರುವ ವಿಳಂಬ ಸರಕಾರಿ ನೌಕರರನ್ನು ನಿರ್ಲಕ್ಷಿಸುತ್ತಿರುವುದರ ಸಂಕೇತ. ನಮ್ಮ ಸಂಘಟಿತ ಹೋರಾಟದಿಂದ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯ. ಯಾವುದೇ ಸಂದರ್ಭದಲ್ಲಿ ನೌಕರರ ಹೋರಾಟಕ್ಕೆ ಇಳಿದರೆ ಇಡೀ ಸರಕಾರವೇ ಅಲ್ಲಾಡಬಹುದು. ಅಂತಹ ಶಕ್ತಿ ಇರುವ ನೌಕರರ ವಾಸ್ತವ ಬೇಡಿಕೆಗಳನ್ನು ಇಡೇರಿಸುವಲ್ಲಿ ಸರಕಾರ ತಳೆದಿರುವ ನಿಲುವು ಮಾತ್ರ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಳಂಬ ಇಡೀ ನೌಕರರ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕಲ್ಲಪ್ಪ ಚಿಕ್ಕೇರಿ, ಸರ್ಕಾರಿ ನೌಕರರ ಬೇಡಿಕೆಗಳ ಈಡೇರಿಕೆಗೆ ಸಂಘ ಸಂಘಟಿತ ಹೋರಾಟ ಮಾಡುತ್ತಲೇ ಬಂದಿದೆ. ಈಗ ರಾಜ್ಯ ಸಂಘಟನೆ ಸಭೆ ನಡೆಯಲಿದ್ದು ಈ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯುವುದು ಬಹುತೇಕ ಖಚಿತ. ನಾವು ಒಟ್ಟಾಗಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗೋಣ ಎಂದ ಅವರು, ಹಾನಗಲ್ಲ ತಾಲೂಕು ಸಂಘಟನೆ ಹೋರಾಟ ಮಾತ್ರವಲ್ಲ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೌಕರರಿಗೂ ಪ್ರತಿಭಾ ಪುರಸ್ಕಾರದ ಮೂಲಕ ಒಳ್ಳೆಯ ಹೆಜ್ಜೆ ಹಾಕುತ್ತಿದೆ. ನಮ್ಮ ನೌಕರರ ಭವನದಲ್ಲಿಯೂ ಕೂಡ ಸುವ್ಯವಸ್ಥಿತತೆಯನ್ನು ಕಾಯ್ದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ನೌಕರ ಭವನ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ದೇವರಾಜ ಕಾರ್ಯಕವನ್ನು ದೀಪ ಬೆಳ
ಗಿಸಿ ಉದ್ಘಾಟಿಸಿದರು. ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ದೊಡ್ಡಮನಿ ವಾರ್ಷಿಕ ವರದಿ ಓದಿದರು. ಕೋಶಾಧ್ಯಕ್ಷ ಎನ್.ಬಿ. ಅಗಸನಹಳ್ಳಿ ವಾರ್ಷಿಕ ಲೆಕ್ಕ ಪತ್ರ ವಿವರಿಸಿದರು. ಗೌರವಾಧ್ಯಕ್ಷ ವಿ.ಆರ್. ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಚಲ್ಲಾಳ, ಎಂ.ಎ. ಜಾಗೀರದಾರ, ವಿ.ಬಿ. ಚಿಕ್ಕೇರಿ, ಮಖಬೂಲ ಲಿಂಗದಳ್ಳಿ, ಅನಿತಾ ಕಿತ್ತೂರ, ಪಿ.ಆರ್. ಚಿಕ್ಕಳ್ಳಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಎಸ್.ಆನಂದ, ಆರ್.ಬಿ. ಬಡಿಗೇರ, ಅನಿಲಕುಮಾರ ಎಸ್.ಜಿ., ಸಿದ್ದು ಗೌರಣ್ಣನವರ, ಎಂ.ಎ. ಮನ್ನಂಗಿ, ಹರೀಶ ಕುದರೀಯವರ, ಗುರುನಾಥ ಗವಾಣಿಕರ, ಎಚ್.ಎನ್. ಪಾಟೀಲ, ಆರ್.ಎಫ್. ತಿರುಮಲೆ, ಅಣ್ಣಪ್ಪ ನಾಯಕರ, ಎಸ್.ಎಲ್.ನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.