ಕನ್ನಡಪ್ರಭ ವಾರ್ತೆ ಹಾಸನ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಆದ್ದರಿಂದ ಸಮಾಜದಲ್ಲಿ ಮಹಿಳೆಯರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ತಿಳಿಸಿದರು.

ಹಾಸನಾಂಬಾ ಕಲಾಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿಯಲ್ಲಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ದಿನಾಚರಣೆಯನ್ನು ಮಹಿಳೆಯರು ಅಷ್ಟೇ ಆಚರಣೆ ಮಾಡಬೇಕು ಅಂತ ಇಲ್ಲ, ಪುರುಷರು ಕೂಡ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುವುದರ ಮೂಲಕ ಇಬ್ಬರು ಸಮಾನ ಎಂಬ ಸಂದೇಶ ಸಾರಬೇಕು. ಪ್ರಸ್ತುತ ಸಮಾಜ ಪುರುಷ ಪ್ರಧಾನ ಸಮಾಜ, ೧೦೦೦ ವರ್ಷಗಳ ಹಿಂದೆ ಕೂಡ ಈ ಸಮಾಜ ಹೀಗೆ ಇದೆ ಯಾವುದೇ ರೀತಿಯಲ್ಲೂ ಬದಲಾವಣೆ ಆಗಿಲ್ಲ ಬದಲಾವಣೆ ಆಗಬೇಕು ಎಂದು ಹೇಳಿದರು. ಸಂವಿಧಾನದಲ್ಲಿ ಜಾತಿ, ಧರ್ಮ, ಲಿಂಗ, ಪ್ರಾದೇಶಿಕ, ಭಾಷೆಗಳಲ್ಲಿ ಸಮಾನತೆಯನ್ನು ಕಾಣುತ್ತೇವೆ, ಸಮಾನತೆಯ ಸ್ವಾತಂತ್ರ್ಯ ಸಮಾಜದಲ್ಲಿ ಎದ್ದು ಕಾಣಬೇಕು, ಆದರೆ ಅಂತಹ ಸಮಾನತೆ ಎಲ್ಲೋ ಒಂದು ಕಡೆ ಮರೆಯಾಗುತ್ತಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ದ್ವಿತೀಯ ದರ್ಜೆ ಪ್ರಜೆ, ಸಂವಿಧಾನ ಮಹಿಳೆಯರಿಗೆ ಬಲವನ್ನು ನೀಡಿದೆ ಆದರೆ ಸಮಾಜ ಆ ರೀತಿಯಲ್ಲಿ ನೋಡುತಿಲ್ಲ, ಸಂವಿಧಾನದ ತತ್ವಗಳನ್ನು ಎಲ್ಲಿವರೆಗೂ ಪಾಲಿಸುವುದಿಲ್ಲವೋ ಅಲ್ಲಿವರೆಗೂ ಸಮಾಜ ಮಹಿಳೆಯರಿಗೆ ಪರಿವರ್ತನೆ ಸಾಧ್ಯವಿಲ್ಲ ಎಂದು ತಿಳಿಸಿದರು. ಅಂಗವಿಕಲ ಮಹಿಳೆಯರಿಗೆ, ಹಿಂದುಳಿದ ವರ್ಗ ಮಹಿಳೆಯರಿಗೆ, ಹಿರಿಯ ನಾಗರಿಕ ಮಹಿಳೆಯರಿಗೆ ಇನ್ನೂ ಕೂಡ ಸಮಾಜದಲ್ಲಿ ಭದ್ರತೆ ಇಲ್ಲ, ಇಂತಹ ಎಲ್ಲ ಮಹಿಳೆಯರಿಗೂ ಕೂಡ ಭದ್ರತೆ ಸಿಗಬೇಕೆಂದರೆ ಸಂವಿಧಾನದ ತತ್ವಗಳನ್ನು ಪಾಲಿಸುತ್ತಾ ಅದರ ಆಯಾಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಒಂದು ಹೆಣ್ಣು ಮಗು ಸಮಾಜದಲ್ಲಿ ರಾಜಕೀಯಕ್ಕೆ ಬಂದರೆ ನೂರಾರು ಜನರು ಪ್ರಶ್ನೆ ಮಾಡುತ್ತಾರೆ, ಅದೇ ರೀತಿ ಗಂಡು ಮಗು ಬಂದರೆ ಯಾರು ಕೂಡ ಪ್ರಶ್ನೆ ಮಾಡುವುದಿಲ್ಲ, ಇಂತಹ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನೈತಿಕತೆ ಸಮಾನವಾಗಿ ದೊರೆಯುತ್ತಿಲ್ಲವೆಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ. ಕೆ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಒಳಗೆ ಮಾತ್ರ ಸೀಮಿತವಲ್ಲ, ಸ್ವಾತಂತ್ರವಾಗಿ ಎಲ್ಲಾ ಕ್ಷೇತ್ರದಲ್ಲೂ ಕೂಡ ಕಾರ್ಯನಿರ್ವಹಿಸಬಹುದು ಎಂದರು. ಆಡು ಮುಟ್ಟದ ಸೊಪ್ಪಿಲ್ಲ ಎಂದು ಹೇಳುತ್ತಾರೋ ಹಾಗೆಯೇ ಹೆಣ್ಣು ಅಲಂಕರಿಸದ ಅಧಿಕಾರವಿಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಮಹಿಳೆಯರನ್ನು ಕಾಣಬಹುದು ಎಂದು ಹೇಳಿದರು. ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಆರ್ಥಿಕವಾಗಿ ಸಬಲೀಕರಣವಾಗಬೇಕೆಂದು ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿತು, ಆದ್ದರಿಂದ ಸಮಾಜದಲ್ಲಿ ಪ್ರತಿಯೊಂದು ಹೆಣ್ಣುಮಗು ಆರ್ಥಿಕವಾಗಿ ಸಬಲೀಕರಣವಾಗಿರುವುದನ್ನು ಕಾಣಬಹುದು ಎಂದು ತಿಳಿಸಿದರು.ಸಾಹಿತಿ ಶೈಲಜಾ ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಸಮಾನವಾಗಿ ನಿಲ್ಲುವವರು ಯಾರು ಕೂಡ ಇಲ್ಲ, ಸಮಾಜದಲ್ಲಿ ಹೆಣ್ಣುಮಗುವನ್ನು ಶಕ್ತಿಯ ಸ್ವರೂಪ ಎಂದು ಕೂಡ ಹೇಳಬಹುದು ಎಂದರು. ಮಹಿಳೆಯರಿಗೆ ಆರ್ಥಿಕವಾದ ಸ್ವಾತಂತ್ರ್ಯ, ಧಾರ್ಮಿಕವಾದ ಸ್ವಾತಂತ್ರ ಹೀಗೆ ಪ್ರತಿಯೊಂದು ಸ್ವಾತಂತ್ರವೂ ಕೂಡ ದೊರೆಯುತ್ತಿದೆ. ಆದ್ದರಿಂದ ಹೆಣ್ಣು ಸಮಾಜದಲ್ಲಿ ಬದುಕಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಹಲವು ರೀತಿಯ ಅನಿಷ್ಟ ಪದ್ಧತಿಗಳಿಗೆ ಒಳಗಾಗುತ್ತಿದ್ದರು, ಆದರೂ ಕೂಡ ಅಂತಹ ಪದ್ಧತಿಗಳನ್ನೆಲ್ಲ ದಾಟಿ ಸಮಾಜದಲ್ಲಿ ಪುರುಷರಷ್ಟು ಸಮನರಾಗಿದ್ದೇವೆ ಎಂದು ಸಾಧನೆ ಮೂಲಕ ತೋರಿಸಿದ್ದಾರೆ ಎಂಬುದು ಹೆಮ್ಮೆ ತರುವಂತಹ ವಿಷಯ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಕೆ.ಎನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.