ಸಾರಾಂಶ
ದುಡಿದವನಿಗೆ ಸಂಬಳ ಕೊಡುವವನು ಮಾಲೀಕ ಎನಿಸಿಕೊಳ್ಳಬಹುದು.ಆದರೆ ಸಂಬಳ ಕೊಡುವ ಮಟ್ಟಕ್ಕೆ ಆತನನ್ನು ಬೆಳಸಿದವ ಕಾರ್ಮಿಕ ಎಂಬುದು ಅಕ್ಷರಶಃ ನಿಜ
ಸಿರುಗುಪ್ಪ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು ಎಂದು ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಹೇಳಿದರು.
ನಗರದ ರಾಜೀವ್ ಗಾಂಧಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲ್ಪವೃಕ್ಷ ಸೇವಾ ವೃಂದದವರಿಂದ ಗುರುವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ದುಡಿದವನಿಗೆ ಸಂಬಳ ಕೊಡುವವನು ಮಾಲೀಕ ಎನಿಸಿಕೊಳ್ಳಬಹುದು.ಆದರೆ ಸಂಬಳ ಕೊಡುವ ಮಟ್ಟಕ್ಕೆ ಆತನನ್ನು ಬೆಳಸಿದವ ಕಾರ್ಮಿಕ ಎಂಬುದು ಅಕ್ಷರಶಃ ನಿಜ. ಕಾರ್ಮಿಕರು ಇಲ್ಲದೆ ದೇಶದ ಮುಂಚೂಣಿಯಲ್ಲಿ ಬರಲು ಸಾಧ್ಯವೇ ಇಲ್ಲ. ದುಡಿವ ಜನರ ಶ್ರಮದಿಂದ ಭಾರತ ಆರ್ಥಿಕವಾಗಿಯೂ ಮುನ್ನಲೆಗೆ ಬಂದಿದೆ ಎಂದು ಹೇಳಿದರು.
ಕಾರ್ಮಿಕ ಹಕ್ಕುಗಳು ರಕ್ಷಣೆಯಾಗಬೇಕು. ಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡುವ ಕೆಲಸವಾಗಬೇಕು. ಕಾರ್ಮಿಕರ ಯೋಗ ಕ್ಷೇಮದ ಕಡೆ ನಿಗಾ ವಹಿಸಬೇಕು. ಅವರ ಸಮಸ್ಯೆಗಳಿಗೆ ಸರ್ಕಾರ ಕಿವಿಯಾಗಬೇಕು ಎಂದರು.ಶಾಲಾ ಮುಖ್ಯಗುರು ಸಿದ್ದಲಿಂಗ ಸ್ವಾಮಿ, ಕಲ್ಪವೃಕ್ಷ ಸೇವಾ ವೃಂದದ ಎಂ.ಸಿ. ಮಾರೇಶ, ಸದಸ್ಯರಾದ ಆನಂದ, ಹಳೆಕೋಟೆ ಯಲ್ಲಪ್ಪ ಇತರರಿದ್ದರು.