ಶಿಗ್ಗಾಂವಿ: ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬಾಗಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಯುವ ಪ್ರಶಸ್ತಿ ಪುರಸ್ಕೃತ ಕಲಾವಿದರು ಆದ ಡಾ. ಶರೀಫ ಮಾಕಪ್ಪನವರ ಹೇಳಿದರು. ಶಿಗ್ಗಾಂವಿ ನಗರದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ತಾಲೂಕಿನ ಚಲವಾದಿ ಮಹಾಸಭಾ ಹಾಗೂ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಾತಂತ್ರ‍್ಯ ಪೂರ್ವ ಕಾಲದಲ್ಲಿ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಎಲ್ಲ ಕಾರ್ಮಿಕರು ದಿನದ ೧೮ ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಆದರೆ ಸ್ವಾತಂತ್ರ‍್ಯಾನಂತರ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾರ್ಮಿಕರಿಗಾಗಿ ಹಲವಾರು ಕಾನೂನುಗಳನ್ನು ಮಾಡಿ ಯೋಜನೆಗಳನ್ನು ಜಾರಿಗೆ ತಂದರು. ಎಲ್ಲ ಕಾರ್ಮಿಕರು ದಿನದಲ್ಲಿ ೮ ಗಂಟೆಗಳ ಕಾಲ ಕೆಲಸ ಮಾಡುವ ಕಾಯ್ದೆ ಜಾರಿ ಮಾಡಿದರು. ಮಹಿಳಾ ಕಾರ್ಮಿಕರಿಗೆ ಪ್ರಸೂತಿ ರಜೆ ಮತ್ತು ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿದರು. ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮೂಲಕ ಕಲ್ಪಿಸಿ ಅವರ ಜೀವನಮಟ್ಟ ಹಾಗೂ ಕೌಟುಂಬಿಕ ಪರಿಸ್ಥಿತಿ ಸುಧಾರಿಸಲು ಕಾರಣರಾದರು ಎಂದು ತಿಳಿಸಿದರು.ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಪ್ರಮೋದಕುಮಾರ ಚಲವಾದಿ ಮಾತನಾಡಿ, ಯಾವುದೇ ಕಾರ್ಮಿಕರಾಗಲಿ ಈ ಸಮಾಜದ ಶ್ರೇಯೋಭಿರುದ್ಧಿಗೆ ಹಗಲಿರುಳೆನ್ನದೆ ದುಡಿಯುತ್ತಾರೆ. ಕಾರ್ಮಿಕರಲ್ಲಿ ಅನೇಕ ಪ್ರಕಾರದ ಕಾರ್ಮಿಕರಿದ್ದು ಅದರಲ್ಲಿ ವಲಸೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು ಇದ್ದು, ವಲಸೆ ಕಾರ್ಮಿಕರು ಸುಮಾರು ತಿಂಗಳು ಕೆಲಸವಿಲ್ಲದೆ ಕಷ್ಟ ಪಡುತ್ತಾರೆ. ಇಂತಹ ಕಾರ್ಮಿಕರ ಮಕ್ಕಳು ಶಿಕ್ಷಣ ಹಾಗೂ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಕಾರ್ಮಿಕರ ಮಕ್ಕಳು ಹಾಗೂ ಕುಟುಂಬಕ್ಕೆ ಸರ್ಕಾರ ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡಬೇಕು ಎಂದರು.ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಕ್ಷೌರದ ಅವರು ಮಾತನಾಡಿ, ಎಲ್ಲ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ಹಂಚಿದರು. ಪುರಸಭೆ ಮುಖ್ಯಧಿಕಾರಿ ಮಲ್ಲೇಶ್ ಆರ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಪ್ಪ ಸೊಬಟಿ ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಹೇಶ ಕಳಸದ ಪ್ರಕಾಶ ಹರಿಗೊಂಡ ಪ್ರಕಾಶ ಮೇಧಾರ ಪುರಸಭೆಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಹಾಜರಿದ್ದರು.