ಬಹಿರ್ದೆಸೆಯೇ ಗತಿ, ವಸತಿ ನಿಲಯದ ಆವರಣವೇ ಸ್ನಾನಗೃಹ

| Published : Feb 06 2024, 01:32 AM IST

ಸಾರಾಂಶ

ವಸತಿ ನಿಲಯಗಳಲ್ಲಿ ಸ್ನಾನಗೃಹಗಳು ಇಲ್ಲ, ಶೌಚಾಲಯಗಳಂತೂ ಮೊದಲೇ ಇಲ್ಲ. ಬಯಲು ಬಹಿರ್ದೆಸೆಯಲ್ಲಿಯೇ ನಿತ್ಯ ಶೌಚ, ವಸತಿ ನಿಲಯದ ಆವರಣವೇ ಸ್ನಾನಗೃಹ. ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧೀನದಲ್ಲಿ ನಡೆಯುತ್ತಿರುವ ಸುಮಾರು 19 ವಸತಿ ನಿಲಯಗಳ ಪೈಕಿ ಶೇ.90 ರಷ್ಟು ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ವಸತಿ ನಿಲಯಗಳಲ್ಲಿ ಸ್ನಾನಗೃಹಗಳು ಇಲ್ಲ, ಶೌಚಾಲಯಗಳಂತೂ ಮೊದಲೇ ಇಲ್ಲ. ಬಯಲು ಬಹಿರ್ದೆಸೆಯಲ್ಲಿಯೇ ನಿತ್ಯ ಶೌಚ, ವಸತಿ ನಿಲಯದ ಆವರಣವೇ ಸ್ನಾನಗೃಹ.

ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧೀನದಲ್ಲಿ ನಡೆಯುತ್ತಿರುವ ಸುಮಾರು 19 ವಸತಿ ನಿಲಯಗಳ ಪೈಕಿ ಶೇ.90 ರಷ್ಟು ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಲಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಲಿ ಇಂಡಿ ಹಾಗೂ ಚಡಚಣ ತಾಲೂಕಿನ ವಸತಿ ನಿಲಯಗಳಿಗೆ ಭೇಟಿಯಾಗಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸಕ್ಕೆ ಮುಂದಾಗದೇ ಇರುವುದು ದುರ್ದೈವದ ಸಂಗತಿ.

ನಿತ್ಯ ನರಕ ಅನುಭವಿಸುತ್ತಿವ ವಿದ್ಯಾರ್ಥಿಗಳು:

ಗ್ರಾಮೀಣ ಪ್ರದೇಶದಲ್ಲಿರುವ ವಸತಿ ನಿಲಯಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಸ್ನಾನದ ಕೊಠಡಿಗಳ ಕೊರತೆ, ಓದಲು ಸಮರ್ಪಕ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ಇಂಡಿ ಹಾಗೂ ಚಡಚಣ ತಾಲೂಕಿನ ವಸತಿ ನಿಲಯಗಳಲ್ಲಿ ರಾರಾಜಿಸುತ್ತಿವೆ.

ಎರಡು ತಾಲೂಕುಗಳಲ್ಲಿ ಕೆಲವೊಂದು ಸರ್ಕಾರಿ ಹಾಗೂ ಕೆಲವೊಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಾಡಿಗೆ ಹಾಗೂ ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳು ದಿನನಿತ್ಯ ಶೌಚಕ್ಕೆ ಬಯಲು ಪ್ರದೇಶವನ್ನೇ ಅವಲಂಭಿಸಬೇಕಿದೆ. ಪ್ರತಿ ವಸತಿ ನಿಲಯದಲ್ಲಿ 90 ರಿಂದ 100 ಮಕ್ಕಳು ವಸತಿ ನಿಲಯದಲ್ಲಿ ವಾಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ನಾನಗೃಹ ಹಾಗೂ ಶೌಚಾಲಯಗಳ ವ್ಯವಸ್ಥೆ ಇಲ್ಲ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನ ಹರಿಸಿ ವಸತಿ ನಿಲಯಗಳ ಸಮಸ್ಯ ಬಗೆ ಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಹೊರ್ತಿ ವಸತಿ ನಿಲಯದಲ್ಲಿ ಶೌಚಾಲಯ ಹಾಗೂ ಚರಂಡಿ ನೀರು ನಿಂತು ದುರ್ವಾಸನೆ ಹರಡುತ್ತಿದ್ದು, ದುರ್ವಾಸನೆಯಲ್ಲಿಯೇ ವಿದ್ಯಾರ್ಥಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ.

ಉಢಾಪೆ ಉತ್ತರ ನೀಡಿದ ಹೊರ್ತಿ ವಸತಿ ನಿಲಯದ ವಾರ್ಡನ್‌:

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೊರ್ತಿ ಗ್ರಾಮದಲ್ಲಿರುವ ವಸತಿ ನಿಲಯದ ವಾರ್ಡನ್‌ ಕೆ.ಬಿ.ಕೊರೆ ವಸತಿ ನಿಲಯದ ಕುರಿತು ಕೇಳಿದರೆ ಉಢಾಪೆ ಉತ್ತರ ನೀಡುತ್ತಾರೆ. ಹೊರ್ತಿ ಗ್ರಾಮದವರೇ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಇದ್ದಾರೆ. ಸಚಿವರು,ಶಾಸಕರು ನನಗೆ ಬಹಳ ಬೇಕಾದವರಿದ್ದಾರೆ. ಯಾರೇನು ಮಾಡಿದರೂ ನನಗೆ ಏನು ಮಾಡಲು ಸಾಧ್ಯವಿಲ್ಲ, ನಾನು ದಲಿತನಿದ್ದೇನೆ ಎಂದು ಉಢಾಪೆತರದ ಉತ್ತರ ನೀಡುತ್ತಾರೆ ಎಂದು ದಲಿತ ಮುಖಂಡ ಧರ್ಮರಾಯ ಸಾಲೋಟಗಿ ಆರೋಪಿಸಿದ್ದಾರೆ. ಜಾಣಕುರುಡತನ ಪ್ರದರ್ಶಿಸುತ್ತಿರುವ ಅಧಿಕಾರಿಗಳು!

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇದ್ದುಕೊಂಡು ಗುಣಮಟ್ಟದ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಸರ್ಕಾರಗಳು ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವಸತಿ ನಿಲಯಗಳ ನಿರ್ವಹಣೆಗೆ ಪ್ರತಿ ವರ್ಷ ಬರುವ ಅನುದಾನವನ್ನು ವಸತಿ ನಿಲಯಗಳ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ.ಹೊರ್ತಿ ವಸತಿ ನಿಲಯದಲ್ಲಿ ದುರ್ವಾಸನೆ ಕಂಡು ಬಂದಿರುವುದು ವಿದ್ಯಾರ್ಥಿಗಳಾಗಲಿ ಯಾರೂ ನನ್ನ ಗಮನಕ್ಕೆ ತಂದಿರುವುದಿಲ್ಲ. ವಾರ್ಡನ್‌ಗೆ ಎರಡು ಚಾರ್ಚ್‌ ಇರುವುದರಿಂದ ಗಮನ ಹರಿಸಲಿಕ್ಕಿಲ್ಲ. ನಾನೇ ನಾಳೆ ಖುದ್ದಾಗಿ ವಸತಿ ನಿಲಯಕ್ಕೆ ಭೇಟಿ ಸಮಸ್ಯೆ ಬಗೆಹರಿಸುತ್ತೇನೆ.

-ಬಿ.ಜೆ.ಇಂಡಿ,

ತಾಲೂಕು ಸಮಾಜ ಕಲ್ಯಾಣಾಧಿಕಾರಿ,ಇಂಡಿ.ವಸತಿ ನಿಲಯದಲ್ಲಿ ಶೌಚಾಲಯದಲ್ಲಿ ಶೌಚಾಲಯ, ಸ್ನಾನಗೃಹ, ಕುಡಿಯುವ ನೀರಿನ ಸಮಸ್ಯೆ ಇದೆ. ವಾರ್ಡನ್‌ಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಶೌಚಕ್ಕೆ ನಿತ್ಯ ಬಯಲೇ ಅನಿವಾರ್ಯವಾಗಿದೆ.

-ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು.ಬಡ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ ವಸತಿ ನಿಲಯಗಳನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಇಲ್ಲಿನ ಅಧಿಕಾರಿಗಳು, ವಾರ್ಡನ್‌ ಸೇರಿ ಸರ್ಕಾರದ ಅನುದಾನ ವಸತಿ ನಿಲಯದ ನಿರ್ವಹಣೆಗೆಂದು ಖರ್ಚು ಮಾಡಿ, ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಬಹಳ ವರ್ಷದಿಂದ ಬೇರೂರಿದ್ದ ವಾರ್ಡನ್‌ ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ವಸತಿ ನಿಲಯಕ್ಕೆ ಸರ್ಕಾರ ಒದಗಿಸಿದ ಅನುದಾನದ ಖರ್ಚಿನ ಬಗ್ಗೆ ತನಿಖೆ ನಡೆಸಬೇಕು.

-ರಾಜು ಶಿಂಧೆ(ಶಿರಗೂರ),

ದಲಿತ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ(ದರವೇ).