ಸಾರಾಂಶ
ಶಿವಮೊಗ್ಗ: ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಆಳವಾಗಿ ಒಡಮೂಡಬೇಕಾಗಿದ್ದ ಕನ್ನಡದ ಬೇರು ಆಧುನಿಕತೆಯ ಬಾಣಕ್ಕೆ ಸಿಲುಕಿ ಹಾಳಾಗಿ ಹೋಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.ನಗರದ ಎ.ಟಿ.ಎನ್.ಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಹಾಗೂ ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪದವಿ ಕನ್ನಡ ಪಠ್ಯಪುಸ್ತಕಗಳು : ಸಾಧ್ಯತೆಗಳು ಹಾಗೂ ಸವಾಲುಗಳು ಒಂದು ದಿನದ ವಿಚಾರ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಹಾಳಾಗುತ್ತಿರುವ ಕನ್ನಡ ಬೇರಿನಿಂದ ಕನ್ನಡದ ನಿಜವಾದ ಅವನತಿ ಪ್ರಾರಂಭವಾದಂತೆ ಆಗುತ್ತದೆ. ಮೊದಲು ಶಿಕ್ಷಕರು ಮಕ್ಕಳಿಗೆ ಕನ್ನಡ ಕಲಿಸುವತ್ತ ಆಸಕ್ತಿ ತೋರಬೇಕು. ಎಷ್ಟೇ ಉತ್ತಮ ಪಠ್ಯ ಕೊಟ್ಟರು, ಶಿಕ್ಷಕರು ಸರಿಯಾಗಿ ಕಲಿಸದೆ ಇದ್ದರೆ, ಎಲ್ಲವೂ ವ್ಯರ್ಥ. ಹೀಗೆ ಮುಂದುವರೆದರೆ ಇನ್ನು ಮೂರು ವರ್ಷಗಳಲ್ಲಿ ಕನ್ನಡ ಆಡು ಭಾಷೆಯಾಗಿ ಉಳಿದರೆ, ಐದು ವರ್ಷಗಳಲ್ಲಿ ಕನ್ನಡದ ಶಾಲೆಗಳು ಮುಚ್ಚಿಹೋಗುವುದರಲ್ಲಿ ಆಶ್ಚರ್ಯವಿಲ್ಲ ಎಂದರು.ಪ್ರಾಥಮಿಕದಲ್ಲಿ ಕನ್ನಡವನ್ನು ಹೇಳಿಕೊಡುವ ವಿಧಾನ ಐವತ್ತು ವರ್ಷ ಹಿಂದಿನದ್ದಾಗಿದೆ. ಪುಸ್ತಕದ ಭಾರದ ಆಧಾರದ ಮೇಲೆ ಕಲಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಕನ್ನಡ ಪುಸ್ತಕಗಳನ್ನು ತಾಂತ್ರಿಕವಾಗಿ ರೂಪಿಸುವ ಅಗತ್ಯವಿದೆ. ಕುಮಾರವ್ಯಾಸರ ಗಮಕ ಕೇಳುವ ಮನಸ್ಥಿತಿಯನ್ನು ಕನ್ನಡದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ. ಮೇಷ್ಟ್ರಿಗೆ ಗಮಕ ಪಾಠ ಮಾಡಲು ಬರೊಲ್ಲ ಎನ್ನುವಾಗ, ತಮ್ಮನ್ನು ತಾವು ಇಂತಹ ಕಮ್ಮಟಗಳ ಮೂಲಕ ಉನ್ನತಿಕರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇತ್ತಿಚೆಗೆ ಕ್ರಿಟಿಕಲ್ ಥಿಂಕಿಂಗ್ ಬಂದುಬಿಟ್ಟಿದೆ. ಕಣ್ಣಿಗೆ ಕಾಣುವ ಯಾವ ವಿಷಯಗಳನ್ನು ನಂಬದೆ, ವಿಮರ್ಶಿಸಿಯೇ ಸ್ವೀಕರಿಸುವ ಕಾಲ ಮಾನದಲ್ಲಿ ನಾವಿದ್ದೆವೆ. ನಿಮ್ಮ ಭವಿಷ್ಯದ ಜವಾಬ್ದಾರಿಗಳನ್ನು ನೀವೆ ತೆಗೆದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕನಿಷ್ಠ 2 ಲಕ್ಷ ಪದಗಳನ್ನು ಓದಬೇಕು. ಪಠ್ಯದೊಳಗಿನ ಪದಗಳನ್ನು ವಿಶಿಷ್ಟವಾಗಿ ಗ್ರಹಿಸಲು ಪ್ರಯತ್ನಿಸಬೇಕು ಎಂದರು.ಅನೇಕ ಕನ್ನಡದ ಉಪನ್ಯಾಸಕರು ಕೆಲಸ ಸಿಕ್ಕಿದ ಮೇಲೆ ತಮ್ಮಲ್ಲಿದ್ದ ಸೃಜನಶೀಲತೆಯನ್ನು ಸಾಯಿಸಿಬಿಡುತ್ತಾರೆ. ಅಧ್ಯಾಪಕರ ಮನೆಗಳಲ್ಲಿ ಗ್ರಂಥಾಲಯವಿಲ್ಲ. ಪ್ರತಿದಿನ ಪತ್ರಿಕೆಗಳನ್ನು ಓದಲ್ಲ. ಸತ್ತು ಹೋದ ಪಠ್ಯವನ್ನು ಇನ್ನಷ್ಟು ಸಾಯಿಸುತ್ತಿದ್ದಾರೆ. ಕನ್ನಡದ ಅಧ್ಯಾಪಕರು ಒಂದಿಷ್ಟು ಅಪ್ಡೇಟ್ ಆಗಬೇಕಿದೆ. ಭಾಷಾಂತರದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿದೆ. ಅದರೆಡೆಗೆ ಒಂದಿಷ್ಟು ನಾವೀನ್ಯ ಪೂರ್ಣವಾಗಿ ಗಮನಹರಿಸಿ. ಕನ್ನಡ ಎಂಎ ಮಾಡಿ ಅದರ ಸುತ್ತಲೆ ಸುತ್ತುತ್ತಿದ್ದರೆ ಉದ್ಯೋಗ ಪಡೆಯುವುದಾದರು ಹೇಗೆ?. ಕನ್ನಡ ಭಾಷೆಯ ಜೊತೆಗೆ ಇತರೆ ಕೌಶಲ್ಯಗಳನ್ನು ಯುವ ಅಧ್ಯಾಪಕ ಸಮೂಹ ರೂಢಿಸಿಕೊಳ್ಳಬೇಕು ಎಂದರು.
ಕುವೆಂಪು ವಿವಿ ಕುಲಪತಿ ಡಾ.ಶರತ್ ಅನಂತಮೂರ್ತಿ ಮಾತನಾಡಿ, ಕನ್ನಡವನ್ನು ಕೇವಲ ಸಾಹಿತ್ಯದ ಸಂವೇದನೆ ಎಂದಷ್ಟೇ ನೋಡಬಾರದು. ಒಬ್ಬ ಕನ್ನಡದ ಮೇಷ್ಟ್ರು ಸೋಶಿಯಾಜಿಸ್ಟ್ ಮತ್ತು ಅಂತ್ರಪಾಲಾಜಿಸ್ಟ್ ಆಗಿಯು ಕಾರ್ಯನಿರ್ವಹಿಸಬೇಕು. ಪಠ್ಯದ ಜೊತೆಗೆ ಶಿಕ್ಷಕರ ಮ್ಯಾನ್ಯುಯಲ್ ಮಾಡುವ ಅಗತ್ಯವಿದೆ ಎಂದರು.ಎಲ್ಲರೂ ಎಲ್ಲವನ್ನೂ ಓದಬೇಕು. ವಿಜ್ಞಾನ ವಿದ್ಯಾರ್ಥಿ ಪಂಪ, ರನ್ನರ ಸಾಹಿತ್ಯ ಓದಬೇಕು. ಅಂತರ ಶಿಸ್ತೀಯತೆಯನ್ನು ಬೆಳೆಸಿಕೊಳ್ಳಬೇಕು. ಪರೀಕ್ಷಾ ಕ್ರಮಗಳಿಂದ ಶೈಕ್ಷಣಿಕ ಚಟುವಟಿಕೆ ವಿನಃ ಬೇರೆ ಯಾವುದೇ ಸೃಜನಶೀಲತೆಯನ್ನು ಬಿತ್ತಲಾಗದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಡಾ.ಸಬೀತಾ ಬನ್ನಾಡಿ, ಉಪಾಧ್ಯಕ್ಷ ಡಾ.ಕುಂಸಿ ಉಮೇಶ್ ಮಾತನಾಡಿದರು. ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಮುತ್ತಯ್ಯ, ಕಾರ್ಯಕ್ರಮ ಸಂಚಾಲಕ ಪ್ರವೀಣ್.ಬಿ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.