ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭವಾಗಿ ವಿಜಯದಶಮಿಗೆ ನೂರು ವರ್ಷವಾಯಿತು. ಸಂಘದ ಉತ್ಸವದಲ್ಲಿ ಭಾಗವಹಿಸಿದ ನಾವೆಲ್ಲರೂ ಪುಣ್ಯವಂತರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು.ಮುರಗೋಡ ಗ್ರಾಮದ ಮಹಾಂತೇಶ್ವರ ಹೈಸ್ಕೂಲ್ ಮೈದಾನದಲ್ಲಿ ಸಂಘದ ವಿಜಯದಶಮಿ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಅವರು ಮಾತನಾಡಿದರು. ಹಿಂದೂ ಸಮಾಜದ ಸಂಘಟನೆಗಾಗಿ ಹಾಗೂ ಹಿಂದೂ ಸಮಾಜದಲ್ಲಿ ಕಿತ್ತೂರ ರಾಣಿ ಚನ್ನಮ್ಮನ ಹಿಡಿದುಕೊಟ್ಟ ಮಲ್ಲಪ್ಪ ಶೆಟ್ಟಿ, ಸಂಗೊಳ್ಳಿ ರಾಯಣ್ಣನನ್ನು ಹಿಡಿದುಕೊಟ್ಟ ಲಕ್ಕಪ್ಪ, ಚಂದ್ರಶೇಖರ ಆಜಾದರನ್ನು ಹಿಡಿದು ಕೊಟ್ಟಂತ ಸಮಾಜಘಾತುಕ ಶಕ್ತಿಗಳು ಬೆಳೆಯ ಬಾರದೆಂದು ಡಾ.ಕೇಶವ ಬಲಿರಾಮ ಪಂಥ ಹೆಡಗೇವಾರ ಅವರು ಸಂಘ ಸ್ಥಾಪನೆ ಮಾಡಿದರು. ಇಡೀ ದೇಶದಲ್ಲಿ 60,000 ಗ್ರಾಮಗಳಲ್ಲಿ ಸಂಘದ ಒಂದು ಶಾಖೆ ನಡೆಯುತ್ತಿದೆ ಎಂದು ತಿಳಿಸಿದರು. ಆರೆಸ್ಸೆಸ್ ಸಂಘ ಶತಾಬ್ಧಿ ವರ್ಷದಲ್ಲಿ ಇರುವುದರಿಂದ ಹಿಂದೂ ಸಮಾಜದ ಮುಂದೆ ಪಂಚ ಪರಿವರ್ತನೆ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಹಾಗೂ ನಾಗರಿಕ ಶಿಷ್ಟಾಚಾರ ಈ ಐದು ಪರಿವರ್ತನೆ ಹಿಂದೂ ಸಮಾಜದಲ್ಲಿ ಆಗಬೇಕು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಪೇಕ್ಷೆ.
ಸಂಘದ ಉದ್ದೇಶ ಹಿಂದೂಗಳ ಸಂಘಟನೆ ಮಾಡುವುದಾಗಿದೆ. ಹಿಂದೂ ಸಮಾಜದ ಯುವಕರನ್ನು ಮಾದಕ ವ್ಯಸನಕ್ಕೆ ದೂಡುವ ದೊಡ್ಡ ಷಡ್ಯಂತರ ನಡೆದಿದೆ, ಅದರ ವಿರುದ್ಧ ಸಂಘ ಹಿಂದೂ ಸಮಾಜದ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಬೇಕಾಗಿದೆ. ಬ್ರಿಟಿಷರು ನಮ್ಮನ್ನು ಜಾತಿ ಭಾಷೆ ಮುಖಾಂತರ ಒಡೆದು ಆಳಿದ್ದರಿಂದ ಇಂದಿಗೂ ಹಿಂದೂ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಬಿರುಕು ಮೂಡುವುದನ್ನು ನೋಡುತ್ತಿದ್ದೇವೆ. ಸಂಘ ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದರ ಕಡೆಗೆ ಕೆಲಸ ಮಾಡುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ. ನಿವೃತ್ತ ರೇಷ್ಮೆ ಇಲಾಖೆ ಅಧಿಕಾರಿ ಪರಮಾನಂದ ಹಿರೇಮಠ ಮಾತನಾಡಿ, ಸಂಘದ ಶತಾಬ್ಧಿ ವರ್ಷದಲ್ಲಿ ನಾನು ಭಾಗಿಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ವೇಳೆ ಹೆಚ್ಚು ಹೆಚ್ಚು ಯುವಕರು ಸಂಘಟನೆಗೆ ಸೇರಿಕೊಂಡು ಹಿಂದೂ ಸಮಾಜದ ಸಂಘಟನೆಯ ಕಡೆಗೆ ಕಾರ್ಯಪ್ರವೃತ್ತರಾಗಬೇಕು ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಹಿರಿಯರಾದ ಬಸವರಾಜ ನಾಗನೂರ, ಅಶೋಕ ಶೆಟ್ಟರ, ರಮೇಶ ದೇಶಪಾಂಡೆ, ಡಾ.ಆರ್.ಎಸ್. ಬಾಳಿಕಾಯಿ, ದೀಪಕ ಗೋಡಸೆ, ಪ್ರದೀಪ ಪಟ್ಟಣಶೆಟ್ಟಿ, ಪ್ರಶಾಂತ ಅಮ್ಮಿನಬಾವಿ, ಲಕ್ಕಪ್ಪ ಕಾರಗಿ, ಚಿದಂಬರ ಕುಮಚಿ, ಬಸವರಾಜ ಕೊಲಕಾರ, ಶಿವರಾಜ ಕಾರಗಿ, ರಾಹುಲ ಬೇಕನಾಳಕರ, ಯಲ್ಲಪ್ಪ ಮುಳ್ಳೂರ, ಪ್ರಕಾಶ ಮುದೆನೂರ, ವಿಜಯ ಕಾಳನ್ನವರ ಇದ್ದರು. ಕಾರ್ಯಕ್ರಮದಲ್ಲಿ ನೂರಾರು ಜನ ಸ್ವಯಂಸೇವಕರು ಗಣವೇಶಧಾರಿಗಳಾಗಿ ಭಾಗಿಯಾಗಿದ್ದರು.