ಸಾರಾಂಶ
ವಿಜಯಪುರ: ದೇವರನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಇದೀಗ ಆತನ ಅಪ್ರಾಪ್ತ ಮಗನನ್ನು ಅಪಹರಿಸಿ ಹತ್ಯೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ದೇವರನಿಂಬರಗಿ ಹೊರಭಾಗದ ತೋಟದಲ್ಲಿರೋ ಭೀಮನಗೌಡ ನಿವಾಸಕ್ಕೆ ಬನ್ನಿ ವಿನಿಮಯಕ್ಕೆ ಬಂದಿದ್ದ ಯುವಕನೊಬ್ಬ ಅಪಹರಣಕ್ಕೆ ಯತ್ನಿಸಿದ್ದಾನೆ. ಬಳಿಕ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದು, ಬಾಲಕನ್ನು ಭೀಮನಗೌಡ ಕುಟುಂಬಸ್ಥರೇ ರಕ್ಷಣೆ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಭೀಮನಗೌಡ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಕುಟುಂಬದವರು ಮತ್ತು ಗ್ರಾಮಸ್ಥರು ಚಡಚಣದ ಕೆಇಬಿ ವೃತ್ತದಲ್ಲಿ ಟೈರ್ ದಹಿಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕು, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದರು.ಅಪಹರಣಕ್ಕೆ ಯತ್ನಿಸಿದ ಯುವಕ ನಿಮ್ಮಪ್ಪನನ್ನು ನಾವೇ ಮರ್ಡರ್ ಮಾಡಿದ್ದೇವೆ. ನಿನ್ನನ್ನು ಮರ್ಡರ್ ಮಾಡುತ್ತೇವೆಂದು ಅಪ್ರಾಪ್ತ ಬಾಲಕನನ್ನು ಹೆದರಿಸಿದ್ದಾರೆ. ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸೆ.3 ರಂದು ದೇವರನಿಂಬರಗಿ ಗ್ರಾಪಂ ಅಧ್ಯಕ್ಷನಾಗಿದ್ದ ಭೀಮನಗೌಡ ಬಿರಾದಾರ ಕಟಿಂಗ್ ಮಾಡಿಸಿಕೊಂಡು ಬರಲು ಹೋದಾಗ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದೀಗ ಆತನ ಮಗನ ಅಪಹರಣಕ್ಕೆ ಯತ್ನ ನಡೆಸಲಾಗಿದೆ.