ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪ್ರತಿನಿತ್ಯ ಬಳಸುವ ಅಹಾರ ಪದಾರ್ಥಗಳಲ್ಲಿಯೇ ಸಾಕಷ್ಟು ಔಷಧೀಯ ಗುಣಗಳಿರುತ್ತವೆ. ಸುಲಭವಾಗಿ ಕೈಗೆಟುವ ಬೆಲೆಯಲ್ಲಿ ಸಿಗುವ ಆರೋಗ್ಯಕರ ಪದಾರ್ಥಗಳನ್ನು ಬಿಟ್ಟು ಕಲುಷಿತ ಪದಾರ್ಥಗಳನ್ನು ಸೇವಿಸಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪ್ರತಿನಿತ್ಯ ಬಳಸುವ ಅಹಾರ ಪದಾರ್ಥಗಳಲ್ಲಿಯೇ ಸಾಕಷ್ಟು ಔಷಧೀಯ ಗುಣಗಳಿರುತ್ತವೆ. ಸುಲಭವಾಗಿ ಕೈಗೆಟುವ ಬೆಲೆಯಲ್ಲಿ ಸಿಗುವ ಆರೋಗ್ಯಕರ ಪದಾರ್ಥಗಳನ್ನು ಬಿಟ್ಟು ಕಲುಷಿತ ಪದಾರ್ಥಗಳನ್ನು ಸೇವಿಸಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಆರೋಗ್ಯ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ, ರಾಷ್ಟ್ರೀಯ ಪೋಷಣಾ ಮಾಸಾಚರಣೆ ಮತ್ತು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಅನಾರೋಗ್ಯಕ್ಕೆ ಕಾರಣವಾಗುತ್ತಿರುವುದು ಆಹಾರದ ಕೊರತೆಯಲ್ಲ, ಅಜಾಗರೂಕ ಆಹಾರ ಪದ್ಧತಿ ಎಂಬುದನ್ನ ಅರಿಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಸಿಗುವ ತಾಜಾ ಹಣ್ಣು, ತರಕಾರಿ, ಧಾನ್ಯ, ಬೇಳೆಕಾಳುಗಳನ್ನು ಉಪಯೋಗಿಸುವುದರಿಂದ ಶೇ.90 ರಷ್ಟು ಕಾಯಿಲೆಗಳನ್ನು ತಡೆಗಟ್ಟಬಹುದು. ಹಾಗಾಗಿ ಇಂದಿನಿಂದಲೇ ಪ್ರತಿಯೊಬ್ಬರೂ ಅಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ಮನುಷ್ಯನ ಆರೋಗ್ಯಕ್ಕೆ ಅಹಾರ ಪದ್ಧತಿ ಅತೀ ಮುಖ್ಯ. ಪೌಷ್ಟಿಕ ಅಹಾರ ಸೇವಿಸುವುದರಿಂದ ದೇಹದ ಬೆಳವಣಿಗೆ, ಬುದ್ಧಿವಂತಿಕೆ, ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಅಪೌಷ್ಟಿಕತೆ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೇ ರಕ್ತಹೀನತೆ, ದೌರ್ಬಲ್ಯ ಹಾಗೂ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪೌಷ್ಟಿಕ ಅಹಾರ ಸೇವಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ.ಎನ್ ಮಾತನಾಡಿ, ಭಾರತ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯಕರ ಜೀವನ ನಡೆಸುವ ಹಕ್ಕು ನೀಡಿದೆ. ಸರ್ಕಾರ ಬಿಸಿಯೂಟ ಯೋಜನೆ, ಅಂಗನವಾಡಿ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಹಾರ ಸುರಕ್ಷತಾ ಅಧಿನಿಯಮ, ರಾಷ್ಟ್ರೀಯ ಅಹಾರ ಭದ್ರತಾ ಅಧಿನಿಯಮಗಳಂತಹ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸಮಾಜದ ಪ್ರತಿಯೊಬ್ಬ ಸದಸ್ಯನಿಗೂ ಪೌಷ್ಟಿಕ ಅಹಾರ ಒದಗಿಸುವುದು ಕೇವಲ ಸರ್ಕಾರದ ಹೊಣೆಗಾರಿಕೆ ಮಾತ್ರವಲ್ಲ. ನಮ್ಮೆಲ್ಲರ ಜವಾಬ್ದಾರಿಯೂ ಹೌದು ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಆರೋಗ್ಯ ಇಲಾಖೆಯ ಅನಸೂಯಾ ತೇರದಾಳ ಮಾತನಾಡಿದರು. ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ರಾಜಶ್ರೀ ಶೀಳಿನ ಉಪನ್ಯಾಸ ನೀಡಿದರು. ಇದೇ ವೇಳೆ ಹೆಣ್ಣು ಮಕ್ಕಳ ಹುಟ್ಟುಹಬ್ಬ, ಅನ್ನ ಪ್ರಾಶನ, ಸೀಮಂತ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಿರಿಯ ಸರ್ಕಾರಿ ಸಹಾಯಕ ಅಭಿಯೋಜಕ ಬಸವರಾಜ ಆಹೇರಿ, ನ್ಯಾ.ಸಂಘದ ಸಹ ಕಾರ್ಯದರ್ಶಿ ಬಿ.ಪಿ.ಮ್ಯಾಗೇರಿ, ವಕೀಲ ಚೇತನ ಶಿವಶಿಂಪಿ, ತಾಲೂಕು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಚೇರಿಯ ಮೇಲ್ವಿಚಾರಕಿ ಕಲಾವತಿ ಬಳುಂಡಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಕೋಟ್:ಪೌಷ್ಟಿಕ ಅಹಾರ ಕೇವಲ ವ್ಯಕ್ತಿಯ ಹಕ್ಕು ಮಾತ್ರವಲ್ಲ, ಸಮಾಜದ ಕರ್ತವ್ಯವೂ ಹೌದು. ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಆರೋಗ್ಯಕರ ಸಮಾಜವನ್ನು ಕಟ್ಟುವ ಮೊದಲ ಹೆಜ್ಜೆ. ಇಂದಿನಿಂದ ನಾವೆಲ್ಲರು ಒಟ್ಟಾಗಿ ಶುದ್ಧ, ತಾಜಾ, ಪೌಷ್ಟಿಕ ಅಹಾರವನ್ನು ಪ್ರತಿದಿನ ಸೇವಿಸುತ್ತೇವೆ ಎಂದು ಶಪಥ ಮಾಡೋಣ.-ಸಚಿನ್ ಕೌಶಿಕ್, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು. ಕೋಟ್:ಮಹಿಳೆಯರು ಮತ್ತು ಮಕ್ಕಳು ಸಮಾಜದ ಆಧಾರ ಸ್ತಂಭಗಳು. ಅವರ ಆರೋಗ್ಯದ ಮೇಲೆ ಒಂದು ಮನೆಯ, ಒಂದು ಸಮುದಾಯದ, ಒಂದು ರಾಷ್ಟ್ರದ ಭವಿಷ್ಯ ನಿಂತಿದೆ. ಅವರಿಗೆ ಪೌಷ್ಟಿಕ ಆಹಾರ ದೊರಕಿಸುವ ಜವಾಬ್ದಾರಿ ಪ್ರತಿಯೊಬ್ಬ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗಿದೆ. ಈ ಕಾರ್ಯವನ್ನು ಚಾಚೂ ತಪ್ಪದೇ ಪಾಲಿಸಬೇಕು.-ರವೀಂದ್ರಕುಮಾರ ಕಟ್ಟಿಮನಿ ಹಿರಿಯ ಸಿವಿಲ್ ನ್ಯಾಯಾಧೀಶರು.