ಡಿಕೆ ಸುರೇಶ್ ಪತ್ನಿ ಎಂದು ಹೇಳಿಕೊಂಡ ಪವಿತ್ರ ಜೈಲು ಪಾಲು

| Published : May 02 2025, 12:12 AM IST

ಡಿಕೆ ಸುರೇಶ್ ಪತ್ನಿ ಎಂದು ಹೇಳಿಕೊಂಡ ಪವಿತ್ರ ಜೈಲು ಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಪವಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಈ ಬಗ್ಗೆ ಡಿ.ಕೆ. ಸುರೇಶ್ ಅವರ ಪರ ವಕೀಲ ಪ್ರದೀಪ್ ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌) ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ಬಂಧಿಸಿರುವ ರಾಮನಗರ ಸಿಇಎನ್ ಠಾಣೆ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿ ಕಾರಾಗೃಹಕ್ಕೆ ಬಿಟ್ಟಿದ್ದಾರೆ.

ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದ ಪವಿತ್ರ ಎಂಬುವರೇ ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿಕೊಂಡು ಅಪಪ್ರಚಾರ ನಡೆಸಿ ಜೈಲು ಪಾಲಾದವರು.

ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಪವಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಈ ಬಗ್ಗೆ ಡಿ.ಕೆ. ಸುರೇಶ್ ಅವರ ಪರ ವಕೀಲ ಪ್ರದೀಪ್ ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಎರಡೂ ಜಾಲತಾಣಗಳಲ್ಲಿ ಏ.8ರಂದು ವಿಡಿಯೋ ಪೋಸ್ಟ್ ಮಾಡಿದ್ದರು.

ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರ ಜೋಡಿಸಿ ಎಡಿಟ್‌ ಮಾಡಿದ ಚಿತ್ರವನ್ನು ಸಹ ಪವಿತ್ರ ಹಾಕಿಕೊಂಡಿದ್ದರು. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದರು.

ವಿಡಿಯೊದಲ್ಲಿ ಏನಿದೆ ? :

‘ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ಪವಿತ್ರ ವಿಡಿಯೋದಲ್ಲಿ ಹೇಳಿದ್ದಾರೆ.

ದೂರಿನಲ್ಲಿ ಏನಿದೆ ?:

ಸುರೇಶ್ ಅವರ ಪತ್ನಿ ಎಂದು ದುರುದ್ದೇಶದಿಂದ ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆ ಸಹ ದುರುಪಯೋಗ ಪಡಿಸಿಕೊಂಡಿದ್ದಾರೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಪವಿತ್ರ ವಿರುದ್ದ ಭಾರತೀಯ ನ್ಯಾಯ ಸಂಹಿತೆ 237 (ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ಮಾಡಿಕೊಳ್ಳುವ ಅಪರಾಧ), 319 (ಮತ್ತೊಬ್ಬರಂತೆ ನಟಿಸಿ ಮೋಸ ಮಾಡುವ ಅಪರಾಧ), 336 (ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸುವ ಅಪರಾಧ) ಹಾಗೂ 353 (ಸಾರ್ವಜನಿಕವಾಗಿ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಕಲಂ ಅಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು.

ಪತಿಯಿಂದ ವಿಚ್ಛೇದನ:

ಇದೀಗ ಪೊಲೀಸರು ಪವಿತ್ರಳನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಮೈಸೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಆಕೆ, ಪತಿಯಿಂದ ವಿಚ್ಛೇದನ ಪಡೆದಿದ್ದರು.

ಮೈಸೂರಿನಲ್ಲಿ ವಾಸವಿದ್ದ ಅಕ್ಕಪಕ್ಕದ ಮನೆಯವರ ಕಿರಿಕಿರಿ ತಾಳದ ಪವಿತ್ರ, ತಾನು ಡಿ.ಕೆ.ಸುರೇಶ್ ಪತ್ನಿ ಎಂದರೆ ಜನರು ಹೆದರುತ್ತಾರೆ ಎಂಬ ಕಾರಣಕ್ಕೆ ಡಿ.ಕೆ.ಸುರೇಶ್ ಪತ್ನಿ ಎಂದು ವಿಡಿಯೋ ಹರಿಬಿಟ್ಟಿದ್ದಾಗಿ ವಿಚಾರಣೆ ವೇಳೆ ಪವಿತ್ರ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.