ಭಟ್ಕಳದಲ್ಲಿ ಹಿಂಜಾವೇಯಿಂದ ಪಂಜಿನ ಮೆರವಣಿಗೆ ಸಂಪನ್ನಕನ್ನಡಪ್ರಭ ವಾರ್ತೆ ಭಟ್ಕಳ
ಅಖಂಡ ಭಾರತದ ಕಲ್ಪನೆ, ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರ ತ್ಯಾಗವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಭಾರತ ಕ್ಷೇತ್ರೀಯ ಸಂಚಾಲಕ ಮತ್ತು ವಕ್ತಾರ ಜಗದೀಶ ಕಾರಂತ ಹೇಳಿದರು.80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶ್ವ ಹಿಂದೂ ಜಾಗರಣ ವೇದಿಕೆ ಹಾಗೂ ಪರಿವಾರ ಸಂಘಟನೆಗಳ ಸಹಯೋಗದಲ್ಲಿ ನಿಚ್ಚಲಮಕ್ಕಿ ಸಭಾಭವನದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ವಾತಂತ್ರ್ಯ ನಮಗೆ ಹೇಗೆ ದೊರೆಯಿತು ಎಂಬುದನ್ನು ಕೇವಲ ಕೆಲವೇ ವ್ಯಕ್ತಿಗಳ ಹೆಸರಿನೊಂದಿಗೆ ಸೀಮಿತಗೊಳಿಸದೆ, ದೇಶಕ್ಕಾಗಿ ಹೋರಾಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಬಳಿಕ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆ ಮಾರಿಕಟ್ಟೆ, ಹನುಮಾನ್ ದೇವಸ್ಥಾನ, ಹೂವಿನ ಮಾರುಕಟ್ಟೆ ಹಾಗೂ ಸರ್ಕಲ್ ಮೂಲಕ ಸಾಗಿತು.ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕದ ಸಂಚಾಲಕ ಜಯಂತ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ಬಿಜೆಪಿ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕೃಷ್ಣಾ ನಾಯ್ಕ, ಶ್ರೀಕಾಂತ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ಗೊಂಡ ವಂದಿಸಿದರು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು.