ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಅಭಿವೃದ್ಧಿ ಸಾಧಿಸಲು ಕೀರ್ತಿ ಕೆ.ವಿ.ಶಂಕರಗೌಡ ಸೇರಿದಂತೆ ಜಿಲ್ಲೆಯ ಹಲವು ಅಗ್ರಗಣ್ಯ ನಾಯಕರ ತ್ಯಾಗ ಅಪಾರವಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಹೇಳಿದರು.ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶನಿವಾರ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಪ್ರಾಥಮಿಕ ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ನಡೆದ 71ನೇ ಅಖಿಲ ಭಾರತದ ಸಹಕಾರ ಸಪ್ತಾಹದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.
ಕೆ.ವಿ.ಶಂಕರಗೌಡರು ಸೇರಿದಂತೆ ಹಲವು ನಾಯಕರು ತಮ್ಮ ತನು, ಮನ, ದನ ತ್ಯಾಗ ಮಾಡಿ ಈ ಕ್ಷೇತ್ರವನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ. ಭವಿಷ್ಯದಲ್ಲಿ ಅವರ ಸಾಧನೆ ಮತ್ತಷ್ಟು ಯಶಸ್ವಿಯಾಗಲು ಸದಸ್ಯರು ಪಾರದರ್ಶಕತೆ, ಆರ್ಥಿಕ ಶಿಸ್ತು ಮತ್ತು ನಾಯಕತ್ವದ ಗುಣ ಮೈಗೂಡಿಸಿಕೊಂಡು ಕೆಲಸ ಮಾಡಿದ್ದಲ್ಲಿ ಇನ್ನಷ್ಟು ಬಲಾಢ್ಯವಾಗಿ ಕಟ್ಟಲು ಸಾಧ್ಯವಿದೆ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ ಹಾಗೂ ಮನ್ಮುಲ್ ನಿರ್ದೇಶಕಿ ರೂಪ ಮಾತನಾಡಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಇಂದು ಬೃಹತ್ ಆಕಾರವಾಗಿ ಬೆಳೆದಿದೆ. ಕೋಟ್ಯಾಂತರ ರು. ವಹಿವಾಟು ನಡೆಸುತ್ತಿದೆ. ಇದಕ್ಕೆ ಹೈನುಗಾರಿಕೆಯಲ್ಲಿ ಗ್ರಾಮೀಣ ಮಹಿಳೆಯರು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿ ಶ್ರಮ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಸ್.ನಾಗೇಂದ್ರ, ಜಿ.ಟಿ.ಪುಟ್ಟಸ್ವಾಮಿ. ಕಾರ್ಕಳ್ಳಿ ಬಸವೇಗೌಡ. ಕೆ.ಸಿ.ಜೋಗಿಗೌಡ, ಕೆ.ಎಲ್.ಶಿವರಾಮು ಅವರನ್ನು ಅಭಿನಂದಿಸಲಾಯಿತು. ಭಾರತಿ ಕಾಲೇಜಿನ ನಿವೃತ್ತ ಸಹಾಯಕ ಪ್ರಾಧ್ಯಾಪಕ ಎಂ .ಪುಟ್ಟಸ್ವಾಮಿಗೌಡ ಅವರು ಸಹಕಾರ ಕ್ಷೇತ್ರದ ಸಾಧನೆ ಮತ್ತು ವೈಫಲ್ಯಗಳ ಕುರಿತು ಪ್ರಧಾನ ಭಾಷಣ ಮಾಡಿದರು.
ಈ ವೇಳೆ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ನೀಲಕಂಠನಹಳ್ಳಿ ರಾಜು, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಪ್ರಧಾನ ವ್ಯವಸ್ಥಾಪಕಿ ರೂಪಶ್ರೀ, ಸಹಕಾರ ಸಂಘಗಳು ಉಪನಿಬಂಧಕ ಎಚ್.ಆರ್.ನಾಗಭೂಷಣ್, ಸಹಾಯಕ ನಿಬಂಧಕರಾದ ಕೆ.ಅನಿತಾ, ಮನ್ಮುಲ್ ಮಾಜಿ ನಿರ್ದೇಶಕ ಹರೀಶ್ ಬಾಬು, ತಾಪಂ ಮಾಜಿ ಸದಸ್ಯ ಸಿ.ಚೆಲುವರಾಜು, ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷೆ ಸಣ್ಣಮ್ಮ, ನಿರ್ದೇಶಕರಾದ ಕೆಂಪೇಗೌಡ, ತಿಬ್ಬೇಗೌಡ, ಕೃಷ್ಣೇಗೌಡ, ಚನ್ನವೀರಯ್ಯ, ದೇವರಾಜು, ಮಾದಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರಿ ಹೆಚ್.ಸಿ.ರಮೇಶ್, ಸಹಾಯಕ ಕಿರಣ್ ಗೌಡ ಇದ್ದರು.