ಸಾರಾಂಶ
- ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಯಕ, ದಾಸೋಹ ಮತ್ತು ಜ್ಞಾನ ಬೋಧನೆಗಳ ಮೂಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆ ಸಾರಿದ ಶ್ರೇಷ್ಠರು ಶ್ರೀ ದೇವರ ದಾಸಿಮಯ್ಯ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ಹೇಳಿದರು. ನಗರದ ಎಂ.ಜಿ.ರಸ್ತೆ ಸಮೀಪದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಜಿಲ್ಲಾ ದೇವಾಂಗ ಸಂಘ ಹಾಗೂ ಬನಶಂಕರಿ ಮಹಿಳಾ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 1045 ನೇ ಶ್ರೀ ದೇವರ ದಾಸಿಮಯ್ಯ ಜಯಂತಿ ಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ 10ನೇ ಶತಮಾನ ದಲ್ಲಿದ್ದ ಆದ್ಯ ವಚನಕಾರ, ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹಾ ಜ್ಞಾನಿ ಎಂದರು.ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕ್ರಾಂತಿಕಾರ ಹೆಜ್ಜೆಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದವರು. ಮನುಷ್ಯನಲ್ಲಿನ ಅಹಂಕಾರ ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗಲಿದೆ ಎಂಬ ತತ್ವವನ್ನು ಸಾರಿದವರು ಎಂದು ಹೇಳಿದರು.ಸಾಹಿತಿ ಎಚ್.ಹೇಮಾವತಿ ಚಂದ್ರಶೇಖರಯ್ಯ ವಿಶೇಷ ಉಪನ್ಯಾಸ ನೀಡಿ, ದೇವಾಂಗ ಜನಾಂಗ ಶಿವನಪಾಲ ನೇತ್ರದಿಂದ ಜನನ ಗೊಂಡವರೆಂಬ ಹಿರಿಮೆಯಿದೆ. ಬದುಕಿನಲ್ಲಿ ಸಿರಿ ಸಂಪತ್ತು ಕ್ಷಣಿಕ, ಜ್ಞಾನ ಸಂಪತ್ತು ಶಾಶ್ವತ ಎಂಬ ತತ್ತ್ವ ಸಾರಿದ ಸಂತರು. ನೇಕಾರಿಕೆಯಲ್ಲಿ ದಾಸಿಮಯ್ಯ ನೇಯ್ಯುತ್ತಿದ್ದರೆ ಖುದ್ದು ಶಿವನ ನೃತ್ಯಗೈಯ್ಯುವ ಎಂಬ ಪ್ರತೀತಿಯಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಂಗ ಸಂಘದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಸಮಾಜದಲ್ಲಿನ ಕಂದಾಚಾರ, ಮೌ ಢ್ಯ, ಅಂಧ ಶ್ರದ್ದೆಗಳ ಬಗ್ಗೆ ದನಿ ಎತ್ತಿದವರು ದೇವರ ದಾಸಿಮಯ್ಯ, ಜನ ಸಾಮಾನ್ಯರ ಬದುಕು, ಭಾವನೆ ಗಳನ್ನು ಕಾವ್ಯವನ್ನಾಗಿಸಿ, ತಮ್ಮ ಅನುಭವದ ಮೂಲಕ ವಚನ ರಚಿಸಿ, ಕಾಯಕದ ಮಹತ್ವ ತಿಳಿಸಿದ ವಚನಕಾರರು ಎಂದರು.
ಶ್ರೀ ದೇವರ ದಾಸಿಮಯ್ಯ ಜಯಂತಿ ಏ. 13 ರಂದು ಶಿವನಿ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದಾಸಿಮಯ್ಯನವರ ವಿಚಾರಧಾರೆ, ತತ್ವಪದಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ನಿರ್ದೇಶಕ ಹರೀಶ್, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ದಿನೇಶ್, ಬನಶಂಕರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುವರ್ಣ ಕೇಶವಮೂರ್ತಿ, ಮುಖಂಡರಾದ ಸಿ.ಆರ್.ಚಂದ್ರಶೇಖರಯ್ಯ, ವಾಣಿ, ಉಮಾ ಪ್ರೇಮ್‌ಕುಮಾರ್ ಉಪಸ್ಥಿತರಿದ್ದರು. 2 ಕೆಸಿಕೆಎಂ 1ಚಿಕ್ಕಮಗಳೂರಿನ ಎಂ.ಜಿ.ರಸ್ತೆ ಸಮೀಪದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಶ್ರೀ ದೇವರ ದಾಸಿಮಯ್ಯ ಜಯಂತಿ ನಡೆಯಿತು. ಭಗವತಿ ಹರೀಶ್, ಕೆ. ಶ್ರೀನಿವಾಸ್, ರವಿಕುಮಾರ್, ಸುವರ್ಣ ಕೇಶವಮೂರ್ತಿ ಇದ್ದರು.