ಡಿಸಿ ಜಪ್ತಿ ಮಾಡಿದ್ದ ಮರಳು ನಾಪತ್ತೆ!

| Published : Apr 02 2024, 01:04 AM IST

ಸಾರಾಂಶ

ಈ ರೀತಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಲ್ಲೆಲ್ಲಾ ಮತ್ತೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿ ಗಂಗೂಬಾಯಿ ಮಾನಕರ್ ತಿಳಿಸಿದರು.

ಕಾರವಾರ: ಜಿಲ್ಲಾಧಿಕಾರಿ ಸ್ವತಃ ದಾಳಿ ಮಾಡಿ ಜಪ್ತಿ ಮಾಡಿದ್ದ ಮರಳು ಕೆಲವೇ ಹೊತ್ತಿನಲ್ಲಿ ಕಾಣೆಯಾದ ಬಗ್ಗೆ ಡಿಸಿ ಗಂಗೂಬಾಯಿ ಅವರೇ ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

ಡಿಸಿ ಗಂಗೂಬಾಯಿ ಮಾನಕರ ತಮ್ಮ ತಂಡದೊಂದಿಗೆ ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ೧೨ ಗಂಟೆ ವೇಳೆ ದಾಳಿ ಮಾಡಿದ್ದು, ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಮರಳನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆಗೆ ತಿಳಿಸದೇ ಏಕಾಏಕಿ ದಾಳಿ ಮಾಡಿದ್ದರು. ರಾತ್ರಿಯಾದ ಕಾರಣ ಪೊಲೀಸರಿಗೆ ಸೂಕ್ತ ಭದ್ರತೆ ಒದಗಿಸಲು ಸೂಚಿಸಿ ಸೋಮವಾರ ಬೆಳಗ್ಗೆ ಗಣಿ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳುವಂತೆ ತಿಳಿಸಿ ಅಲ್ಲಿಂದ ತೆರಳಿದ್ದರು. ಆದರೆ, ಗಣಿ ಇಲಾಖೆಯವರು ತೆರಳುವಾಗಲೇ ಕೆಲವು ಕಡೆ ಜಪ್ತಿ ಮಾಡಿದ್ದ ಮರಳು ಇರಲೇ ಇಲ್ಲ.

ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶಕ್ಕೆ ಈಗಾಗಲೇ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ಹೀಗಿದ್ದಾಗ್ಯೂ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಈ ರೀತಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಲ್ಲೆಲ್ಲಾ ಮತ್ತೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.