ದಾಬಸ್‍ಪೇಟೆ: ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರ್ಪಡಿಸಸಬೇಕೆಂಬ 47 ವರ್ಷಗಳ ಜನತೆಯ ಕನಸನ್ನು ಶಾಸಕನಾದ 3 ವರ್ಷದಲ್ಲೇ ನನಸು ಮಾಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಬಗ್ಗೆ ನನಗೆ ಆತ್ಮತೃಪ್ತಿಯಿದೆ ಎಂದು ಶಾಸಕ ಶ್ರೀನಿವಾಸ್ ಭಾವನಾತ್ಮಕವಾಗಿ ಸಂತಸ ವ್ಯಕ್ತಪಡಿಸಿದರು

ದಾಬಸ್‍ಪೇಟೆ: ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರ್ಪಡಿಸಸಬೇಕೆಂಬ 47 ವರ್ಷಗಳ ಜನತೆಯ ಕನಸನ್ನು ಶಾಸಕನಾದ 3 ವರ್ಷದಲ್ಲೇ ನನಸು ಮಾಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಬಗ್ಗೆ ನನಗೆ ಆತ್ಮತೃಪ್ತಿಯಿದೆ ಎಂದು ಶಾಸಕ ಶ್ರೀನಿವಾಸ್ ಭಾವನಾತ್ಮಕವಾಗಿ ಸಂತಸ ವ್ಯಕ್ತಪಡಿಸಿದರು.

ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸೋಲೂರು ಹೋಬಳಿ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಆಡಳಿತ ಮಾಗಡಿ ತಾಲೂಕಿಗೆ ಸೇರಿತ್ತು. ಇದರಿಂದ ಸೋಲೂರಿನ ಜನರ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗುತ್ತಿರಲಿಲ್ಲ. ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡಿಸಬೇಕೆಂಬ ಜನರ ಬೇಡಿಕೆ ಸಾಕಾರಗೊಂಡಿದೆ ಎಂದರು.

13 ಇಲಾಖೆಗಳು ಶೀಘ್ರ ಸೇರ್ಪಡೆ:

ಸೋಲೂರು ಹೋಬಳಿಗೆ ಸಂಬಂಧಿಸಿದಂತೆ ಸುಮಾರು 18 ಇಲಾಖೆಗಳು ಈಗಾಗಲೇ ನೆಲಮಂಗಲ ತಾಲೂಕಿಗೆ ಸೇರಿಸಿದ್ದು, ಶಿಕ್ಷಣ, ಬೆಸ್ಕಾಂ, ಪೊಲೀಸ್, ಆರ್‌ಡಿಪಿಆರ್, ಕೃಷಿ ಇಲಾಖೆಗಳು ಸೇರಿದಂತೆ 13 ಇಲಾಖೆಗಳು ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಸೋಲೂರು ಹೋಬಳಿಯ ಜನತೆಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯ ಸಿಗುವಂತೆ ತ್ವರಿತ ಕ್ರಮ ವಹಿಸಲಾಗುತ್ತಿದೆ ಎಂದರು.

ಪ್ರಜಾ ಸೇವಾ ಆಂದೋಲನದ ಭಾಗವಾಗಿ ಸೋಲೂರಲ್ಲಿ ಮೊದಲ ಸಭೆ ಆಯೋಜಿಸಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಸೋಲೂರು ಜನತೆಯ ಸಮಸ್ಯೆಗಳನ್ನು ಆಲಿಸಲು ಬಂದಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಬರುವ ಅರ್ಜಿಗಳಿಗೆ ತ್ವರಿತ ಪರಿಹಾರ ಒದಗಿಸಲಾಗುವುದು. ತಾಲೂಕು ಕಚೇರಿ, ಕಸಬಾ ಹೋಬಳಿ, ಸೋಲೂರು ಗ್ರಾಪಂ ಮಟ್ಟದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗುವುದು. ಅಲ್ಲಿಯೂ ಬಂದು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.

ತಾಲೂಕಾದ್ಯಂತ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ 6 ತಿಂಗಳ ಒಳಗಾಗಿ 10,000 ನಿವೇಶನ ಸಿದ್ದಪಡಿಸಿ ಹಂಚುವ ಗುರಿ ಹೊಂದಿದ್ದುಕ, ಸೋಲೂರು ಹೋಬಳಿ ಒಂದರಲ್ಲೇ 100 ಎಕರೆ ಜಾಗ ಗುರುತಿಸಿ ನಿವೇಶನ ಅಭಿವೃದ್ಧಿಪಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಜಾ ಸೇವಾ ಆಂದೋಲನ ಪ್ರತಿ ಶನಿವಾರ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಜನರ ಬಳಿಗೆ ಅಧಿಕಾರಿಗಳು ನೇರವಾಗಿ ತೆರಳಿ ಅವರ ಸಮಸ್ಯೆ, ಅಹವಾಲು ಆಲಿಸಿ ತ್ವರಿತ ಪರಿಹಾರ ಒದಗಿಸಲಿದ್ದಾರೆ. ಕಾನೂನು ಅಡಿಯಲ್ಲಿ ಬರುವ ಅರ್ಜಿಗಳಿಗೆ 21 ದಿನದಲ್ಲಿ ಪರಿಹಾರ ಮಾಡಲು ಕ್ರಮ ವಹಿಸಲಾಗುವುದು. ಸೋಲೂರು ಹೋಬಳಿಯ 6 ಗ್ರಾಪಂಗಳ 68 ಕಂದಾಯ ಗ್ರಾಮಗಳನ್ನು ಈಗಾಗಲೇ ನೆಲಮಂಗಲ ತಾಲೂಕಿಗೆ ಸೇರಿಸಲಾಗಿದೆ. ಸೋಲೂರಿನ ಜನರ ಸಮಸ್ಯೆ, ಅಹವಾಲು ಆಲಿಸಿ ಸರ್ಕಾರದ ಎಲ್ಲಾ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

195 ಅರ್ಜಿಗಳ ಸ್ವೀಕಾರ: ಪ್ರಜಾಸೇವಾ ಸಭೆಯಲ್ಲಿ ಕಂದಾಯ ಇಲಾಖೆಗೆ 106, ತಾಪಂಗೆ 68, ಸಿಡಿಪಿಒ ಇಲಾಖೆಗೆ 8, ಆಹಾರ ಇಲಾಖೆ 8, ಎಡಿಎಲ್ ಆರ್ 3, ಕೃಷಿ 2, ಬೆಸ್ಕಾಂಗೆ ಸಂಬಂಧಿಸಿದಂತೆ 1 ಅರ್ಜಿ ಸೇರಿದಂತೆ ಒಟ್ಟು 195 ಅರ್ಜಿಗಳು ಸ್ವೀಕಾರವಾಗಿದೆ.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ. ವಾಸಂತಿ ಅಮರ್, ಉಪವಿಭಾಗಾಧಿಕಾರಿ ಮಂಜುನಾಥ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ತಹಸೀಲ್ದಾರ್ ಮಲ್ಲೇಶ್, ತಾಪಂ ಇಒ ಬಿಂದು, ಡಿವೈಎಸ್ಪಿ ಉಮಾರಾಣಿ, ಬಿಇಒ ರಮೇಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ 2 :

ಸೋಲೂರಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಶಾಸಕ ಶ್ರೀನಿವಾಸ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಕೆ.ಎನ್‌.ಅನುರಾಧ, ಜಿಪಂ ಸಿಇಒ ಡಾ. ವಾಸಂತಿ ಅಮರ್‌ ಇತರರು ಹಾಜ್ರಿದ್ದರು.